ನಾರಾಯಣ ಗುರು ಕುರಿತ ಆರೆಸ್ಸೆಸ್ ಹೇಳಿಕೆಗೆ ವ್ಯಾಪಕ ಆಕ್ರೋಶ

ಕಲ್ಲಿಕೋಟೆ, ಡಿ.18: 'ನಮಗೆ ಜಾತಿಯಿಲ್ಲ' ಎನ್ನುವ ಶ್ರೀ ನಾರಾಯಣ ಗುರು ನೀಡಿದ ಹೇಳಿಕೆ ಸುಳ್ಳು ದಾಖಲೆಯಾಗಿದೆ ಎಂದು ಸಂಘಪರಿವಾರದ ಸಂಘಟನೆಯಾದ ಭಾರತೀಯ ವಿಚಾರ ಕೇಂದ್ರ ನಿರ್ಣಯವನ್ನು ಪಾಸು ಮಾಡಿದ ಬಳಿಕವೂ ಎಸ್‌ಎನ್‌ಡಿಪಿ ಸಭೆಯ ನಾಯಕರು ವಹಿಸಿರುವ ಮೌನ ಅದರ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ ಎಂದು ವರದಿಯಾಗಿದೆ. ಕಲ್ಲಿಕೋಟೆ ಯೂನಿಯನ್ ಮುಂತಾದ ಸಂಘಟನೆಗಳು ಭಾರತೀಯ ವಿಚಾರ ಕೇಂದ್ರದ ನಿರ್ಣಯವನ್ನು ವಿರೋಧಿಸಿದರೂ ಸಭೆಯ ಪ್ರಧಾನ ಕಾರ್ಯದರ್ಶಿ ವೆಳ್ಳಪಳ್ಳಿ ನಟೇಶನ್ ಪ್ರತಿಕ್ರಿಯಿಸದೆ ಮೌನವಹಿಸಿದ್ದು ಚರ್ಚಾಸ್ಪದವಾಗಿದೆ ಎನ್ನಲಾಗುತ್ತಿದೆ.
ಭಾರತೀಯ ವಿಚಾರ ಕೇಂದ್ರದ ನಿರ್ಣಯವನ್ನು ತಳ್ಳಿಹಾಕಿ ಎಸ್‌ಎನ್‌ಡಿಪಿ ಸಭೆಯ ಪ್ರಧಾನ ಕಾರ್ಯದರ್ಶಿ ಹೇಳಿಕೆ ನೀಡಬೇಕೆಂದು ಕಲ್ಲಿಕೋಟೆ ಯೂನಿಯನ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಅದೇ ವೇಳೆ ನಿರ್ಣಯದ ಕುರಿತು ಅವಸರದಿಂದ ಪ್ರತಿಕ್ರಿಯಿಸುವುದು ಸರಿಯಲ್ಲ. ಅದರಿಂದಾಗಿ ಬಿಡಿಜೆಎಸ್-ಬಿಜೆಪಿ ಸಂಬಂಧದಲ್ಲಿ ಬಿರುಕು ಉಂಟಾಗಬಹುದೆಂದು ವೆಳ್ಳಪಳ್ಳಿಯ ಲೆಕ್ಕಾಚಾರ ಎನ್ನಲಾಗಿದೆ. ಕೇಂದ್ರ ಸರಕಾರದಿಂದ ಎಸ್‌ಎನ್‌ಡಿಪಿಯ ಸಹ ಸಂಘಟನೆಯಾದ ಬಿಡಿಜೆಎಸ್‌ಗೆ ಸಿಗುವ ಮಂಡಳಿ ಅಧ್ಯಕ್ಷರ ಪದವಿ ಕೈತಪ್ಪಲಿದೆ ಎಂಬ ಆತಂಕ ಬಿಡಿಜೆಎಸ್ ನಾಯಕರಲ್ಲಿದೆ ಎಂದು ನಿಕವರ್ತಿ ಮೂಲಗಳು ತಿಳಿಸಿವೆ.
ಕೊಲ್ಲಂ, ಎರ್ನಾಕುಲಂ, ಕಲ್ಲಿಕೋಟೆಗಳಲ್ಲಿ ಎಸ್‌ಎನ್‌ಡಿಪಿಯ ವಲಯ ಮಟ್ಟದ ಸಭೆಗಳು ವೆಳ್ಳಪಳ್ಳಿ ನಟೇಶನ್‌ರ ನೇತೃತ್ವದಲ್ಲಿ ಶೀಘ್ರದಲ್ಲಿ ನಡೆಯಲಿದೆ. ಕಲ್ಲಿಕೋಟೆ ಯೂನಿಯನ್ ಪದಾಧಿಕಾರಿಗಳು ಈ ವಿಷಯವನ್ನು ಸಭೆಯಲ್ಲಿ ಎತ್ತಲಿದ್ದಾರೆ. ಇದೇವೇಳೆ ಕೊಡುಂಗಲ್ಲೂರ್ ಎಸ್‌ಎನ್‌ಡಿಪಿ ಯೂನಿಯನ್‌ನ ಸದಸ್ಯರಲ್ಲಿ ಕೆಲವರು ಅದರ ಕೇಂದ್ರ ನಾಯಕತ್ವವನ್ನು ವಿರೋಧಿಸುತ್ತಿದ್ದಾರೆ.
ಕೆಲವು ಹಿಂದುತ್ವದ ಸಂಘಟನೆಗಳು ಎಸ್‌ಎನ್‌ಡಿಪಿಯ ಶಿವಗಿರಿಮಠವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಆದ್ದರಿಂದ ಗುರುನಿಂದೆಯ ವಿರುದ್ಧ ಕೇಂದ್ರ ನಾಯಕರು ಪ್ರತಿಕ್ರಿಯಿಸುತ್ತಿಲ್ಲ. ಈ ನಾಯಕರ ಮೌನ ಆಸಂಘಟನೆಗಳ ಪ್ರಯತ್ನಕ್ಕೆ ಸಮ್ಮತಿ ಸೂಚಿಸಿದಂತೆ ಎಂದು ಶ್ರೀ ನಾರಾಯಣ ದರ್ಶನ ವೇದಿಕೆಯ ಕಾರ್ಯಕರ್ತ ಸಿ.ವಿ.ಮೋಹನ್ ಕುಮಾರ ಎಂಬವರು ಆರೋಪಿಸಿದ್ದಾರೆ. ಇದೇ ವೇಳೆ ಎಸ್‌ಎನ್‌ಡಿಪಿಯ ಮಾಜಿ ಅಧ್ಯಕ್ಷ ಭಾರತೀಯ ವಿಚಾರ ಕೇಂದ್ರ ಸಾಕಷ್ಟು ಅಧ್ಯಯನ ನಡೆಸದೆ ನಿರ್ಣಯಕೈಗೊಂಡಿದೆ ಎಂದು ಅಡ್ವೊಕೇಟ್ ವಿದ್ಯಾಸಾಗರ್ ಅಭಿಪ್ರಾಯಪಟ್ಟಿದ್ದಾರೆ.
ಇದು ಅಸಂಬದ್ಧ ನಿರ್ಣಯ: ಸಚ್ಚಿದಾನಂದ ಸ್ವಾಮಿ
ಕಲ್ಲಿಕೋಟೆ: ಶ್ರೀ ನಾರಾಯಣ ಗುರು ಅವರ ಹೇಳಿಕೆ ‘ನಮಗೆ ಜಾತಿಯಿಲ್ಲ ಕುರಿತು ಭಾರತೀಯ ವಿಚಾರ ಕೇಂದ್ರದ ಸುಳ್ಳು ದಾಖಲೆಯೆಂದು ನಿರ್ಣಯ ಕೈಗೊಂಡಿದ್ದು ಶುದ್ಧ ಅಸಂಬದ್ಧವಾಗಿದೆ ಎಂದು ಶಿವಗಿರಿ ಮಠದ ಹಿರಿಯ ಸ್ವಾಮೀಜಿ ಸಚ್ಚಿದಾನಂದ ಸ್ವಾಮಿ ಹೇಳಿದ್ದಾರೆ. ಶ್ರೀ ನಾರಾಯಣ ಗುರು ಅವರ ಪ್ರಧಾನ ಶಿಷ್ಯ ಶ್ರೀ ನಾರಾಯಣ ಚೈತನ್ಯ ಸ್ವಾಮಿಯವರನ್ನು ಕೂಡಾ ಶ್ರೀ ನಾರಾಯಣ ಗುರುವಿನಷ್ಟೇ ಗೌರವದಿಂದ ಎಲ್ಲರೂ ಕಾಣುತ್ತಾರೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಶ್ರೀ ನಾರಾಯಣ ಚೈತನ್ಯ ಅವರು ನಕಲಿ ದಾಖಲೆ ಸೃಷ್ಟಿಸಿದ್ದಾರೆನ್ನುವುದು ನಿಜವಲ್ಲ ಎಂದಿರುವ ಸಚ್ಚಿದಾನಂದ ಸ್ವಾಮಿ, 1961ರಲ್ಲಿ ಶ್ರೀ ನಾರಾಯಣಗುರು ನಮಗೆ ಜಾತಿಯಿಲ್ಲ ಎಂದು ಹೇಳಿದ್ದಾರೆ. ಆದರೆ ಅದಕ್ಕಿಂತ ಮೊದಲು 1913ರಲ್ಲಿ ಸ್ಥಾಪನೆಗೊಂಡಿದ್ದ ಅದ್ವೈತಾಶ್ರಮದ ಬಾಗಿಲಲ್ಲಿ ‘ಮನುಷ್ಯನಿಗೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವನು. ಪ್ರತಿಯೊಬ್ಬರಿಗೆ ಪ್ರತ್ಯೇಕ ಜಾತಿ, ಧರ್ಮ ಹಾಗೂ ದೇವನಿಲ್ಲ ಎಂದು ಬರೆದಿರಿಸಲಾಗಿತ್ತು ಎಂದು ಅವರು ನೆನಪಿಸಿದ್ದಾರೆ. ಶ್ರೀ ಸಚ್ಚಿದಾನಂದ ಸ್ವಾಮಿ ಚಾಲಕ್ಕುಡಿ ಗಾಯತ್ರಿ ಆಶ್ರಮದ ಅಧ್ಯಕ್ಷರು ಎಂದು ವರದಿ ತಿಳಿಸಿದೆ.







