ವಿಶ್ವದ ‘ಅಪಘಾತ ರಾಜಧಾನಿ’ ಹಣೆಪಟ್ಟಿ ಕಳಚಿಕೊಳ್ಳಲು ಭಾರತಕ್ಕೆ ಸಾಧ್ಯವಿದೆ
ಸುಪ್ರೀಂಕೋರ್ಟ್ ಅಭಿಮತ

ಹೊಸದಿಲ್ಲಿ, ಡಿ.18: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ನಿರ್ಬಂಧಿಸುವ ಕಾನೂನನ್ನು ಸೂಕ್ತವಾಗಿ ಅನುಷ್ಠಾನಗೊಳಿಸುವ ಮೂಲಕ ಭಾರತವು ವಿಶ್ವದ ‘ಅಪಘಾತ ರಾಜಧಾನಿ’ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
2014ರಲ್ಲಿ ದೇಶದಲ್ಲಿ 2.37 ಲಕ್ಷ ರಸ್ತೆ ಅಪಘಾತ ಸಂಭವಿಸಿದ್ದು ಇದರಲ್ಲಿ ಕನಿಷ್ಟ 85,462 ಮಂದಿ ಮೃತಪಟ್ಟಿದ್ದು 2.59 ಲಕ್ಷ ಜನ ಗಾಯಗೊಂಡಿದ್ದಾರೆ ಎಂದು ಅಂಕಿಅಂಶಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. 2009ರ ವರದಿಯ ಪ್ರಕಾರ ವಿಶ್ವದಲ್ಲಿ ಅತ್ಯಧಿಕ ರಸ್ತೆ ಅಪಘಾತ ಸಂಭವಿಸುವ ರಾಷ್ಟ್ರ ಭಾರತವಾಗಿದ್ದು ಇಲ್ಲಿ ಪ್ರತೀ ನಾಲ್ಕು ನಿಮಿಷಕ್ಕೊಮ್ಮೆ ರಸ್ತೆ ಅಪಘಾತ ಸಂಭವಿಸುತ್ತದೆ.
ಅಮೂಲ್ಯ ಮಾನವ ಸಂಪನ್ಮೂಲವು ಅಪಘಾತಕ್ಕೆ ಬಲಿಯಾಗುತ್ತಿರುವುದು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತಕ್ಕೆ ಒಂದು ಬಲುದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್, ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ನಿಷೇಧಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಇದನ್ನು ತಡೆಗಟ್ಟಬಹುದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕುರ್ ನೇತೃತ್ವದ ತ್ರಿಸದಸ್ಯರ ಪೀಠವೊಂದು ತಿಳಿಸಿದೆ. ಸುಪ್ರೀಂಕೋರ್ಟ್ ಡಿ.15ರಂದು ನೀಡಿದ ಆದೇಶದಲ್ಲಿ ಹೆದ್ದಾರಿ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ ವಿಧಿಸಿತ್ತು.







