ಪಂಜಾಬ್ ಚುನಾವಣೆ ಎದುರಿಸಲು ಕಾಂಗ್ರೆಸ್ ರಣತಂತ್ರ
ಒಂದು ಕುಟುಂಬಕ್ಕೆ ಒಂದು ಟಿಕೇಟು ಸೂತ್ರ : ಅಮರೀಂದರ್ ಸಿಂಗ್

ಹೊಸದಿಲ್ಲಿ, ಡಿ.18: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಠಿಣ ಸ್ಪರ್ಧೆ ಎದುರಿಸುತ್ತಿರುವ ಕಾಂಗ್ರೆಸ್ ಒಂದು ಕುಟುಂಬಕ್ಕೆ ಒಂದು ಟಿಕೇಟು ಎಂಬ ಸೂತ್ರ ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ ಚುನಾವಣೆ ಕಣದಲ್ಲಿರುವ ಹಾಲಿ ಶಾಸಕರು ತಮ್ಮ ಕ್ಷೇತ್ರ ಬದಲಿಸಿ ಚುನಾವಣೆಗೆ ನಿಲ್ಲಲು ಅನುವು ಮಾಡಿಕೊಡುವುದಿಲ್ಲ ಎಂದು ತಿಳಿಸಿದೆ.
ಈ ಎರಡು ನಿಯಮಗಳ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಹಾಲಿ ಶಾಸಕರು ತಮ್ಮ ಕ್ಷೇತ್ರ ಬದಲಾಯಿಸುವಂತಿಲ್ಲ. ಇದರಿಂದ ಮತದಾರರಿಗೆ ತಪ್ಪು ಸಂದೇಶ ಕಳಿಸಿದಂತಾಗುತ್ತದೆ. ಆದರೆ ಮೀಸಲು ಕ್ಷೇತ್ರಕ್ಕೆ ಈ ನಿಯಮ ಅನ್ವಯಿಸದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ತಿಳಿಸಿದ್ದಾರೆ. ಮುಂದಿನ ವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಪಕ್ಷದ ಪ್ರಧಾನ ಚುನಾವಣಾ ಸಮಿತಿ ಸಭೆಯಲ್ಲಿ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಉಳಿದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದವರು ತಿಳಿಸಿದರು.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸನಾವರ್‌ಲಾಲ್ ಸಿಂಗ್ ಸೇರಿದಂತೆ ಆರು ಮಂದಿ ಹಾಲಿ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರ ಬದಲಿಸಿ ಸ್ಪರ್ಧಿಸಲು ಉತ್ಸುಕರಾಗಿ ದ್ದಾರೆ ಎನ್ನಲಾಗಿದೆ. ಪಂಜಾಬ್ ವಿಧಾನಸಭೆಯಲ್ಲಿ 117 ಸ್ಥಾನಗಳಿದ್ದು ಇದರಲ್ಲಿ 61 ಸ್ಥಾನಗಳಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.





