ಅಲ್ಪಸಂಖ್ಯಾತರ ಸ್ಥಿತಿಗತಿ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಂಗಳೂರು. ಡಿ. 18: ರಾಜ್ಯದಲ್ಲಿನ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ, ಸ್ಥಿತಿಗತಿಗಳ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿ ರಚಿಸಿ, ಈ ಸಮಿತಿ ವರದಿ ಬಂದ ಬಳಿಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಜನರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅವಕಾಶಗಳು ಮತ್ತು ಸಂಪತ್ತು ಹಂಚಿಕೆ ಆಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ‘ಸಮಾನ ಅವಕಾಶಗಳ ಕಾಯ್ದೆ’ಯನ್ನು ರೂಪಿಸಲು ಕ್ರಮ ವಹಿಸಲಿದೆ ಎಂದು ತಿಳಿಸಿದರು.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಜನವರಿಯಲ್ಲಿ ಬಿಡುಗಡೆಗೊಳ್ಳಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಆಧರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.
ಯಾರು ಅಲ್ಪಸಂಖ್ಯಾತರು: ಅಲ್ಪಸಂಖ್ಯಾತರು ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಮತೀಯ ಮತ್ತು ಭಾಷಾ ಅಲ್ಪಸಂಖ್ಯಾತರಿದ್ದಾರೆ. ಆದರೆ, ಯಾರು ಅಲ್ಪಸಂಖ್ಯಾತರು ಎಂಬುದಕ್ಕೆ ನಿರ್ದಿಷ್ಟ ವ್ಯಾಖ್ಯಾಯನವಿಲ್ಲ ಎಂದ ಅವರು, ಅಲ್ಪಸಂಖ್ಯಾತರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಾದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ವಿಶ್ಲೇಷಿಸಿದರು.
ಎಲ್ಲ ವರ್ಗದವರ ಹಕ್ಕುಗಳ ರಕ್ಷಣೆ ಆದಾಗ ಮಾತ್ರವೇ ಎಲ್ಲರೂ ಸುರಕ್ಷಿತವಾಗಿ ಬದುಕಲು ಸಾಧ್ಯ. ಆಗಲೇ ಎಲ್ಲರೂ ಪರಸ್ಪರ ಸೌಹಾರ್ದತೆ ಮತ್ತು ಸಾಮರಸ್ಯದಿಂದ ಸಹಭಾಳ್ವೆ ನಡೆಸಲು ಸಾಧ್ಯ ಎಂದ ಅವರು, ರಾಜ್ಯದಲ್ಲಿ 11ನೆ ಜನಗಣತಿ ಪ್ರಕಾರ 14.6ರಷ್ಟು ಅಲ್ಪಸಂಖ್ಯಾತರಿದ್ದು, ಈ ಆಯೋಗ ರಚಿಸಿ 33 ವರ್ಷಗಳು ಕಳೆದಿವೆ. ಇದಕ್ಕೆ ಕಾನೂನು ರಚಿಸಲಾಗಿದೆ ಎಂದರು.
ರಕ್ಷಣೆಗೆ ಬದ್ಧ: ರಾಜ್ಯ ಸರಕಾರ ಮುಸ್ಲಿಮರು, ಕ್ರೈಸ್ತರು, ಜೈನ, ಬೌದ್ಧ ಸೇರಿದಂತೆ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿದ್ದು, ಈ ಬಗ್ಗೆ ಯಾರೊಬ್ಬರಿಗೂ ಸಂಶಯ ಬೇಡ ಎಂದು ಅಭಯ ನೀಡಿದ ಸಿದ್ದರಾಮಯ್ಯ, ನೀವೆಲ್ಲರೂ ನಮ್ಮ ಪರವಾಗಿದ್ದು, ನಾವೂ ನಿಮ್ಮ ಪರವಾಗಿದ್ದೇನೆ ಎಂದು ಹೇಳಿದರು.
ಸಮಾನತೆಯ ಆಧಾರದಲ್ಲಿ ಸಮಾಜವನ್ನು ಕಟ್ಟಬೇಕಾದರೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಾಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಸಮಾನತೆ ಇದ್ದರೆ ಸಮಾಜದಲ್ಲಿ ಶಾಂತಿ-ಸಾಮರಸ್ಯ ನೆಲೆಸುತ್ತದೆ ಎಂದು ಅವರು, ಯಾವುದೇ ಸಮುದಾಯಕ್ಕೆ ಅಭದ್ರತೆ ಕಾಡದಂತೆ ನೋಡಿಕೊಳ್ಳುವುದು ಚುನಾಯಿತ ಸರಕಾರಗಳ ಜವಾಬ್ದಾರಿ ಎಂದರು.
ಪ್ರತ್ಯೇಕ ಇಲಾಖೆ ಸ್ಥಾಪನೆ: ಈ ಹಿಂದೆ ತಾನು ಹಣಕಾಸು ಸಚಿವನಾಗಿದ್ದ ವೇಳೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮತ್ತು ಅಲ್ಪಸಂಖ್ಯಾತರಿಗೆ ಅರ್ಥಿಕ- ಸಾಮಾಜಿಕ ಶಕ್ತಿ ಕಲ್ಪಿಸಲು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇನೆ ಎಂದು ಸ್ಮರಿಸಿದರು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಯುಎಪಿಎ ಕಾಯ್ದೆಯ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಸಮಿತಿಯೊಂದನ್ನು ರಚಿಸಿ ಪರಾಮರ್ಶೆ ನಡೆಸಬೇಕು. ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ಸಂಪುಟ ಉಪ ಸಮಿತಿ ರಚಿಸಬೇಕೆಂದು ಕೋರಿದರು.
ಸಮಾರಂಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ತನ್ವೀರ್ ಸೇಠ್, ರೋಷನ್ ಬೇಗ್, ಕೆ.ಜೆ.ಜಾರ್ಜ್, ಕೆ.ಆರ್.ರಮೇಶ್ ಕುಮಾರ್, ಯು.ಟಿ.ಖಾದರ್, ಎಂ. ಕೃಷ್ಣಪ್ಪ, ಎಂ.ಆರ್.ಸೀತಾರಾಂ, ಕೇಂದ್ರದ ಮಾಜಿ ಸಚಿವ ಕೆ.ರೆಹ್ಮಾನ್ ಖಾನ್, ಮೇಲ್ಮನೆ ಸಚೇತಕ ಐವಾನ್ ಡಿಸೋಜಾ, ಮುಖಂಡರಾದ ಸಲೀಂ ಅಹ್ಮದ್, ಉಬೇದುಲ್ಲಾ ಶರೀಫ್, ಸೈಯದ್ ಶಫೀವುಲ್ಲಾ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
‘ಟಿಪ್ಪು ಸುಲ್ತಾನ್ ಈ ದೇಶಕಂಡ ಅಪ್ರತಿಮ ಹೋರಾಟಗಾರ, ದೇಶಪ್ರೇಮಿ, ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿಯವರ ವಿನಾಕಾರಣ ವಿರೋಧ ವ್ಯಕ್ತಪಡಿಸಿದರು. ಇತಿಹಾಸ ಅರಿಯದೆ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತಿಹಾಸ ತಿಳಿಯದೆ ಭವಿಷ್ಯ ರೂಪಿಸಲು ಸಾಧ್ಯವಿಲ್ಲ’
-ಸಿದ್ದರಾಮಯ್ಯ ಮುಖ್ಯಮಂತ್ರಿ







