ನಿಪುಣ ವೈದ್ಯನೇ ಸಾವಿನ ಕದ ತಟ್ಟುವ ರೋಗಿಯಾದಾಗ...
ವಿಶ್ವ ಶ್ರೇಷ್ಠ ಸಂಸ್ಥೆಗಳಲ್ಲಿ ಕಲಿತ ಈ ಯುವ ನ್ಯೂರೋ ಸರ್ಜನ್ ಮಾಡಿದ್ದೇನು ?

ವಾಷಿಂಗ್ಟನ್: ಅಮೆರಿಕದಲ್ಲಿರುವ ಭಾರತೀಯ ಮೂಲದ ಪಾಲ್ ಕಲಾನಿಧಿ 36ನೇ ವರ್ಷದಲ್ಲಿ ತಮ್ಮ ನರವಿಜ್ಞಾನ ಶಸ್ತ್ರಚಿಕಿತ್ಸಕರಾಗಿ ಕೋರ್ಸ್ ಪೂರ್ಣಗೊಳಿಸಲು ಇನ್ನು 15 ತಿಂಗಳಷ್ಟೇ ಬಾಕಿ. ಇವರು ನಾಲ್ಕನೇ ಹಂತದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಬೆಳಕಿಗೆ ಬಂತು. ಇದರ ಶಸ್ತ್ರಚಿಕಿತ್ಸೆಯೂ ಅಸಾಧ್ಯವಾಗಿರುವುದರಿಂದ ಸದ್ಯದಲ್ಲೇ ಅವರು ಕೊನೆಯುಸಿರೆಳೆಯುವುದು ಖಚಿತವಾಗಿತ್ತು.
ಇವರ ಆತ್ಮಚರಿತ್ರೆ ಬ್ರೆತ್ ಬಿಕಮ್ಸ್ ಏರ್ ಆರಂಭವಾಗಿರುವುದೇ ವೈದ್ಯೆ ಪತ್ನಿ ಲೂಸಿಯ ಜತೆ ಅವರದ್ದೇ ಸಿಟಿ ಸ್ಯ್ಕಾನ್ ಪರೀಕ್ಷೆ ಮಾಡುವ ಮೂಲಕ. "ನನಗೆ ಎಲ್ಲ ಹಿರಿಯರ ಗೌರವವೂ ಸಂದಿದೆ. ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯೂ ಸಿಕ್ಕಿದೆ. ಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಉದ್ಯೋಗದ ಆಫರ್‌ಗಳೂ ಸಿಕ್ಕಿವೆ. ಗೌರವ ಶಿಖರದ ತುತ್ತತುದಿ ತಲುಪಿದ್ದೇನೆ" ಎಂದು ಚಿಕಿತ್ಸೆ ಆರಂಭಿಸಿದ ಬಳಿಕ ಬರೆದ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.
ಕಣ್ಣುಮುಚ್ಚಿ ತೆರೆಯುದರೊಳಗೆ ಜೀವಗಳನ್ನು ರಕ್ಷಿಸುವ ಹೊಣೆ ಹೊತ್ತ ಇವರು ಸಾವಿನ ಅಂಚಿನಲ್ಲಿರುವ ರೋಗಿಯಾಗಿ ಪರಿವರ್ತನೆಯಾಗಿದ್ದಾರೆ. ವೈದ್ಯನಾಗಿ ನಾನು, "ಕ್ಯಾನ್ಸರ್ ಜತೆಗಿನ ಹೋರಾಟದಲ್ಲಿ ನಾನು ಗೆಲ್ಲುತ್ತೇನೆ" ಎಂದೇ ಹೇಳುತ್ತೇನೆ" ಎಂದು ವಿವರಿಸಿದ್ದಾರೆ.
ಈ ಕೃತಿ ಪೂರ್ಣಗೊಳಿಸುವ ಮುನ್ನ 2015ರ ಮಾರ್ಚ್‌ನಲ್ಲಿ ಅವರು ಮೃತಪಟ್ಟರು. ಇದಾಗಿ ಹತ್ತು ತಿಂಗಳ ಬಳಿಕ ಇವರ ಬ್ರೆತ್ ಬಿಕಮ್ ಏರ್ ಕೃತಿ ಅತಿಹೆಚ್ಚು ಮಾರಾಟವಾದ ಕೃತಿಯಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ ಇದನ್ನು ಓದುತ್ತಿದ್ದರೆ, ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಭಾಸವಾಗುತ್ತದೆ. ಮಗುವಿನ ಮುಖ ನೋಡುವ ಭಾಗ್ಯ ಇಲ್ಲದಿದ್ದರೂ, ಅವರು ಮಗುವನ್ನು ಪಡೆಯಲು ಮುಂದಾಗಿರುತ್ತಾರೆ.
ಮನುಷ್ಯ ಜೀವಶಾಸ್ತ್ರ, ಇಂಗ್ಲಿಷ್ ಸಾಹಿತ್ಯ, ಇತಿಹಾಸ ಹಾಗೂ ವಿಜ್ಞಾನ ಮತ್ತು ವೈದ್ಯವಿಜ್ಞಾನದ ತತ್ವಜ್ಞಾನ ಇವರಿಗೆ ಸಾವನ್ನು ಎದುರಿಸುವ ಛಾತಿ ತಂದುಕೊಟ್ಟಿತ್ತು.







