ರಿಯಲ್ ಮ್ಯಾಡ್ರಿಡ್‌ಗೆ ಕ್ಲಬ್ ವಿಶ್ವಕಪ್
ರೊನಾಲ್ಡೊ ಹ್ಯಾಟ್ರಿಕ್ ಗೋಲು

ಯೊಕೊಹಾಮ(ಜಪಾನ್), ಡಿ.18: ಕ್ರಿಸ್ಟಿಯಾನೊ ರೊನಾಲ್ಡೊ ದಾಖಲಿಸಿದ ‘ಹ್ಯಾಟ್ರಿಕ್’ ಗೋಲು ಸಹಾಯದಿಂದ ರಿಯಲ್ ಮ್ಯಾಡ್ರಿಡ್ ತಂಡ ಕ್ಲಬ್ ವಿಶ್ವಕಪ್ ಫೈನಲ್‌ನಲ್ಲಿ ಜಯಶಾಲಿಯಾಗಿದೆ.
ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಆತಿಥೇಯ ಕಾಶಿಮಾ ಅಂಟ್ಲೆರ್ಸ್ ತಂಡವನ್ನು ಹೆಚ್ಚುವರಿ ಸಮಯದಲ್ಲಿ 4-2 ಗೋಲುಗಳ ಅಂತರದಿಂದ ಮಣಿಸಿತು.
ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿದವು. ಹೆಚ್ಚುವರಿ ಸಮಯದಲ್ಲಿ (98,102 ನಿಮಿಷ) ಗೋಲು ಬಾರಿಸಿದ ರೊನಾಲ್ಡೊ ಮ್ಯಾಡ್ರಿಡ್‌ಗೆ ಟ್ರೋಫಿ ಗೆದ್ದುಕೊಟ್ಟರು. ರೊನಾಲ್ಡೊ ಮ್ಯಾಡ್ರಿಡ್‌ನ ಪರ 40ನೆ ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದರು. ಮ್ಯಾಡ್ರಿಡ್‌ನ ಪರ ಲೂಕಾ ಮ್ಯಾಡ್ರಿಕ್ 9ನೆ ನಿಮಿಷದಲ್ಲಿ 1-0 ಮುನ್ನಡೆ ಒದಗಿಸಿಕೊಟ್ಟರು.
44ನೆ ನಿಮಿಷದಲ್ಲಿ ಒಗಸವರ ಗೋಲು ಬಾರಿಸಿ 1-1 ರಿಂದ ಸಮಬಲಗೊಳಿಸಿದರು. ಶಿಬಾಸಕಿ 52ನೆ ನಿಮಿಷದಲ್ಲಿ ಜಪಾನ್‌ಗೆ 2-1 ಮುನ್ನಡೆ ಒದಗಿಸಿಕೊಟ್ಟರು. 60ನೆ ನಿಮಿಷದಲ್ಲಿ ಗೋಲು ಬಾರಿಸಿದ ರೊನಾಲ್ಡೊ 2-2 ರಿಂದ ಸಮಬಲಗೊಳಿಸಿದರು.
ಹೆಚ್ಚುವರಿ ಸಮಯದಲ್ಲಿ ಅವಳಿ ಗೋಲು ಬಾರಿಸಿದ ರೊನಾಲ್ಡೊ ಸ್ಪೇನ್‌ನ ದೈತ್ಯ ಕ್ಲಬ್ 3 ವರ್ಷಗಳಲ್ಲಿ ಎರಡನೆ ಬಾರಿ ಕ್ಲಬ್ ವಿಶ್ವಕಪ್ ಜಯಿಸಲು ನೆರವಾದರು. ಮ್ಯಾಡ್ರಿಡ್ 5ನೆ ಬಾರಿ ಈ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಗೆಲುವಿನ ಮೂಲಕ ಮ್ಯಾಡ್ರಿಡ್ ಎಲ್ಲ ಪಂದ್ಯಾವಳಿಯಲ್ಲಿ ಅಜೇಯ ಗೆಲುವಿನ ಸಂಖ್ಯೆಯನ್ನು 37ಕ್ಕ ಏರಿಸಿತು.
ಚಾಂಪಿಯನ್ಸ್ ಲೀಗ್, ಯುರೋಪಿಯನ್ ಚಾಂಪಿಯನ್ ಹಾಗೂ 2016ರ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಜಯಿಸಿದ ಪೋರ್ಚುಗಲ್ ಆಟಗಾರ ರೊನಾಲ್ಡೊ ಈ ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದರು.







