ನೀತಿಸಂಹಿತೆ ಉಲ್ಲಂಘನೆ: ಅಮಿತ್ ಶಾಗೆ ಕ್ಲೀನ್ ಚಿಟ್

ಮುಝಫ್ಫರನಗರ,ಡಿ.18: 2014ರ ಲೋಕಸಭಾ ಚುನಾವಣೆಗಳ ಸಂದರ್ಭ ನೀತಿಸಂಹಿತೆ ಉಲ್ಲಂಘನೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಉತ್ತರ ಪ್ರದೇಶ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.
ಶನಿವಾರ ನ್ಯಾಯಾಲಯಕ್ಕೆ ಅಂತಿಮ ವರದಿಗಳನ್ನು ಸಲ್ಲಿಸಿದ ಸಂದರ್ಭ ಪೊಲೀಸರು ಶಾ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ತಿಳಿಸಿದ್ದರು.
ಈ ಎರಡು ಪ್ರಕರಣಗಳಲ್ಲಿ ದೂರುದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ನ್ಯಾಯಾಲಯವು ಜ.3 ಮತ್ತು ಜ.17ನ್ನು ನಿಗದಿಗೊಳಿಸಿದೆ.
ಶಾ ಬರ್ವಾರ್ ಗ್ರಾಮದಲ್ಲಿ ಆಕ್ಷೇಪಾರ್ಹ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರೆಂದು ಆರೋಪಿಸಲಾಗಿತ್ತು. ‘‘ಮೋದಿ (ನರೇಂದ್ರ) ಗೆದ್ದರೆ ‘ಮುಲ್ಲಾ ’ಮುಲಾಯಂ ಅವರ ಸರಕಾರವು ಉರುಳುತ್ತದೆ ’’ ಎಂದು ಶಾ ಹೇಳಿದ್ದರೆನ್ನಲಾಗಿದೆ.
ಚುನಾವಣಾ ಆಯೋಗದ ನಿರ್ದೇಶದ ಮೇರೆಗೆ ಎಸ್‌ಡಿಎಂ ಬಾಬುರಾಮ್ ಮತ್ತು ಸಹಾಯಕ ಚುನಾವಣಾಧಿಕಾರಿ ರಾಮಕುಮಾರ್ ಅವರು ಜಿಲ್ಲೆಯ ಕಕ್ರೋಲಿ ಮತ್ತು ನ್ಯೂಮಂಡಿ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಿದ್ದರು. ಶಾ ಅವರು ಉ.ಪ್ರದೇಶದಲ್ಲಿ ಪ್ರಚಾರ ಮಾಡುವುದನ್ನು ಚುನಾವಣಾ ಆಯೋಗವು ನಿಷೇಧಿಸಿತ್ತು.





