ಕೇಂದ್ರೀಯ ಸಶಸ್ತ್ರ ಮೀಸಲು ಪಡೆಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆಗೆ ಕೇಂದ್ರದ ಹೊಸ ಮಾರ್ಗಸೂಚಿ

ಹೊಸದಿಲ್ಲಿ.ಡಿ.18: ಭದ್ರತಾ ಪಡೆಗಳ ಸಿಬ್ಬಂದಿಗಳಲ್ಲಿ ಸ್ಮಾರ್ಟ್‌ಪೋನ್‌ಗಳ ಬಳಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಯೋಧರು ಸಾಮಾಜಿಕ ಮಾಧ್ಯಮಗಳಲ್ಲಿ ರಹಸ್ಯ ಕಾರ್ಯಾಚರಣೆ ಮತ್ತು ಸೇವಾ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿಗಳನ್ನು ಸರಕಾರವು ಹೊರಡಿಸಿದೆ. ಇವುಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮವನ್ನು ಜರುಗಿಸ ಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.
ಗೃಹ ಸಚಿವಾಲಯವು ಹೊರಡಿಸಿರುವ ಈ ಮಾರ್ಗಸೂಚಿಯು ಚಾಲ್ತಿಯಲ್ಲಿರುವ ಅಥವಾ ಅಂತ್ಯಗೊಂಡ ಕಾರ್ಯಾಚರಣೆಯ ಚಿತ್ರಗಳನ್ನು ತೆಗೆಯಲು ಸಿಬ್ಬಂದಿಗಳು ತಮ್ಮ ಸೆಲ್ ಫೋನ್‌ಗಳನ್ನು ಬಳಸಿದ ಮತ್ತು ನಂತರ ಈ ಚಿತ್ರಗಳು ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್,ಯು ಟ್ಯೂಬ್,ಲಿಂಕಡಿನ್ ಮತ್ತು ಇನಸ್ಟಾಗ್ರಾಂ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗಿರುವ ನಿದರ್ಶನಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದೆ.
ಕಾರ್ಯಾಚರಣೆ ಅಥವಾ ಪಡೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿರುವುದು ಸರಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸುವುದು ಅತ್ಯಗತ್ಯವಾಗಿದೆ ಎಂದು ಗೃಹಸಚಿವಾಲಯದ ಇತ್ತೀಚಿನ ಆದೇಶವು ಹೇಳಿದೆ.
ಆದರೆ ಸರಕಾರದ ಮಾರ್ಗಸೂಚಿಯಲ್ಲಿ ದೋಷವಿರುವುದನ್ನು ಈ ಕೇಂದ್ರೀಯ ಪಡೆಗಳ ಹಿರಿಯ ಅಧಿಕಾರಿಗಳು ಬೆಟ್ಟು ಮಾಡಿದ್ದಾರೆ. ಕಾರ್ಯಾಚರಣೆಗಳಲ್ಲಿ ರಾಜ್ಯ ಪೊಲೀಸ್ ಮತ್ತು ಸೇನೆಯಂತಹ ಹಲವಾರು ಭದ್ರತಾ ಏಜನ್ಸಿಗಳೂ ಭಾಗಿಯಾಗುತ್ತವೆ ಮತ್ತು ಈ ಮಾರ್ಗಸೂಚಿಗಳು ಅವುಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಮಾಹಿತಿ ಉಲ್ಲಂಘನೆಯಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.







