ಭೂಸೇನಾ ಮುಖ್ಯಸ್ಥರಾಗಿ ರಾವತ್ ನೇಮಕ : ಕೇಂದ್ರ ಸರಕಾರದ ಕ್ರಮಕ್ಕೆ ಕಾಂಗ್ರೆಸ್ ಟೀಕೆ

ಹೊಸದಿಲ್ಲಿ, ಡಿ.18: ಇಬ್ಬರು ಹಿರಿಯ ಅಧಿಕಾರಿಗಳ ಸೇವಾ ಜ್ಯೇಷ್ಠತೆಯನ್ನು ಬದಿಗೊತ್ತಿ ಭೂಸೇನಾ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ನೇಮಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕಾಂಗ್ರೆಸ್ ಟೀಕಿಸಿದ್ದು ಸೇನೆಯು ಸಾರ್ವಜನಿಕ ಸಂಸ್ಥೆಯಾಗಿದ್ದು ರಾಷ್ಟ್ರವು ಈ ಕುರಿತು ಉತ್ತರ ಬಯಸಿದೆ ಎಂದು ತಿಳಿಸಿದೆ.
ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ, ಇದು ರಾವತ್ ವಿರುದ್ದ ದಾಳಿಯಲ್ಲ. ಕಾನೂನಿನ ಪ್ರಶ್ನೆಯಾಗಿದೆ ಎಂದರು.
ಓರ್ವ ಯೋಧನಾಗಿ ಅಥವಾ ಅವರ ಕಾರ್ಯನಿರ್ವಹಣೆಯ ವಿಷಯದಲ್ಲಿ ರಾವತ್ ಅರ ಬಗ್ಗೆ ನಮಗೆ ಗೌರವವಿದೆ. ಆದರೆ ಅವರನ್ನು ಸರಕಾರ ನೇಮಿಸಿರುವ ಕ್ರಮದ ಬಗ್ಗೆ ನಮ್ಮ ವಿರೋಧವಿದೆ ಎಂದು ತಿವಾರಿ ತಿಳಿಸಿದ್ದಾರೆ. ಸೇನೆಯ ಪಶ್ಚಿಮ ವಿಭಾಗದ ಕಮಾಂಡರ್ ಲೆ.ಜ. ಪ್ರವೀಣ್ ಭಕ್ಷಿ ಮತ್ತು ದಕ್ಷಿಣ ವಿಭಾಗದ ಕಮಾಂಡರ್ ಪಿ.ಎಂ. ಹ್ಯಾರಿಸ್ ಅವರು ಲೆ.ಜ. ರಾವತ್ ಅವರಿಗಿಂತ ಜ್ಯೇಷ್ಠರು. ಹೀಗಿರುವಾಗ ಅವರನ್ನು ಕಡೆಗಣಿಸಿ ರಾವತ್ ಅವರನ್ನು ಭೂಸೇನಾ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂದು ತಿವಾರಿ ಟೀಕಿಸಿದರು.
ಕಾಂಗ್ರೆಸ್ ಸರಕಾರ 1980ರಲ್ಲಿ ಈ ರೀತಿ ಮಾಡಿದೆ. ಆದ್ದರಿಂದ ನಮಗೂ ಈ ರೀತಿ ಮಾಡುವ ಹಕ್ಕಿದೆ ಎಂಬ ಸರಕಾರದ ವಾದವನ್ನು ‘ಅಸಂಬದ್ಧ’ ಎಂದವರು ಬಣ್ಣಿಸಿದರು. ಯಾವುದೇ ಪ್ರಸಂಗವನ್ನು ಪರಿಸ್ಥಿತಿಗೆ ಅನುಗುಣವಾಗಿ ಅವಲೋಕಿಸಬೇಕು. ಅವರು ಹಾಗೆ ಮಾಡಿರುವಾಗ ನಾವೇಕೆ ಮಾಡಬಾರದು ಎಂಬ ವಾದಕ್ಕೆ ಅರ್ಥವಿಲ್ಲ. ಆದ್ದರಿಂದ ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿರುವುದೇಕೆ ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕು ಎಂದವರು ಹೇಳಿದರು.
ಸರಕಾರಕ್ಕೆ ಅವರ ವಿರುದ್ಧ ಏನಾದರೂ ಬೇಸರವಿದೆಯೇ, ಅವರ ವೃತ್ತಿಪರತೆಯ ಬಗ್ಗೆ ಪ್ರಶ್ನೆಯಿದೆಯೇ, ಸರಕಾರದ ಈ ನಿರ್ಧಾರಕ್ಕೆ ಕಾರಣವೇನು ಎಂದವರು ಪ್ರಶ್ನಿಸಿದರು.ಸರಕಾರದ ಈ ನಿರ್ಧಾರ ವಿವಾದಾತ್ಮಕವಾಗಿದೆ ಎಂದು ಸಿಪಿಐ ಮುಖಂಡ ಡಿ.ರಾಜಾ ಅವರೂ ಟೀಕಿಸಿದ್ದಾರೆ.
ನ್ಯಾಯಾಂಗ ಇಲಾಖೆಯಲ್ಲಿನ ನೇಮಕಾತಿ , ಸಿಬಿಐ ನಿರ್ದೇಶಕರ ಹುದ್ದೆ ಈಗಾಗಲೇ ವಿವಾದ ಹುಟ್ಟುಹಾಕಿದೆ. ಈಗ ಸೇನೆಯ ನೇಮಕಾತಿಯ ಸರದಿ. ಅತ್ಯುನ್ನತ ಹುದದೆಗೆ ನಡೆದ ನೇಮಕಾತಿಗಳೆಲ್ಲಾ ವಿವಾದಕ್ಕೆ ಕಾರಣವಾಗಿರುವುದು ದುರದೃಷ್ಟಕರ ಎಂದ ಅವರು, ಇದು ದೇಶದ ಮತ್ತು ಪ್ರಜಪ್ರಭುತ್ವ ವ್ಯವಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಅತ್ಯುನ್ನತ ಹುದ್ದೆಗಳಿಗೆ ನೇಮಕ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಯಾರೂ ಈ ಬಗ್ಗೆ ಪ್ರಶ್ನಿಸುವಂತಾಗಬಾರದು ಎಂದವರು ಹೇಳಿದ್ದಾರೆ.







