ಬಿಎಸ್ಸೆನ್ನೆಲ್ ಸೇವಾ ಕೇಂದ್ರಗಳಲ್ಲಿ ಇ- ಕೆವೈಸಿ ಸೇವೆ
ಮಂಗಳೂರು, ಡಿ. 18: ಬಿಎಸ್ಸೆನ್ನೆಲ್ ಸೇವಾ ಕೇಂದ್ರ (ಕಸ್ಟಮರ್ ಕೇರ್) ಗಳಲ್ಲಿ ತಿಂಗಳೊಳಗೆ ಆಧಾರ್ ಆಧಾರಿತ ಇ- ಕೆವೈಸಿ (ಎಲೆಕ್ಟ್ರಾನಿಕ್-ನೋ ಯುವರ್ ಕಸ್ಟಮರ್) ಸೇವೆ ಲಭ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತ ಮುಖ್ಯ ಮಹಾ ಪ್ರಬಂಧಕ ಪಿ. ನಾಗರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವ್ಯವಸ್ಥೆಯಲ್ಲಿ ಗ್ರಾಹಕರು ಕೇವಲ ಆಧಾರ್ ನಂಬ್ರದ ಆಧಾರದಲ್ಲಿ ವ್ಯವಹಾರ ನಡೆಸಬಹುದಾಗಿದೆ. ಇತರ ಯಾವುದೇ ದಾಖಲೆ ಅಗತ್ಯವಿರುವುದಿಲ್ಲ ಎಂದರು.
ಎಲ್ಲಾ ಬಿಎಸ್ಸೆನ್ನೆಲ್ ಸೇವಾ ಕೇಂದ್ರಗಳಿಗೆ ಹೊಸ ಸ್ಮಾರ್ಟ್ ಫೋನ್ ಹಾಗೂ ಫಿಂಗರ್‌ಪ್ರಿಂಟರ್ ರೀಡರ್ ಒದಗಿಸಲಾಗುವುದು. ಗ್ರಾಹಕರು ಹೊಸ ಸಿಮ್ ಪಡೆಯುವ ಸಂದರ್ಭ ಅಥವಾ ಯಾವುದೇ ಗುರುತು ದೃಢೀಕರಣ ಸಂದರ್ಭ ಫಿಂಗರ್‌ಪ್ರಿಂಟರ್ ರೀಡರ್‌ನಲ್ಲಿ ತಮ್ಮ ಹೆಬ್ಬೆಟ್ಟು ಒತ್ತಿ ಆಧಾರ್ ಸಂಖ್ಯೆ ಫೀಡ್ ಮಾಡಿದರೆ ಸಾಕು. ಫೋಟೋ, ಇತರ ಯಾವುದೇ ಗುರುತು ದಾಖಲೆ ಒದಗಿಸಬೇಕಾಗಿಲ್ಲ ಎಂದವರು ವಿವರಿಸಿದರು.
ಮುಂದಿನ ವರ್ಷ 4 ಜಿ
ಮುಂದಿನ ವರ್ಷ 4 ಜಿ ಸೌಲಭ್ಯ ಒದಗಿಸಲಾಗುವುದು. ನೆಟ್‌ವರ್ಕ್ ಸಮಸ್ಯೆ ಇರುವ ಕಡೆ ಹಾಗೂ 3 ಜಿ ಸೌಲಭ್ಯ ಇರುವ ಎಲ್ಲಾ ಕಡೆ ವೈಫೈ ಹಾಟ್ ಸ್ಪಾಟ್ ಸೌಲಭ್ಯ ಒದಗಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 264 ಸಹಿತ ರಾಜ್ಯದಲ್ಲಿ ಒಟ್ಟು 1800 3ಜಿ ಟವರ್ ನಿರ್ಮಿಸಲಾಗಿದೆ ಎಂದವರು ತಿಳಿಸಿದರು.
ನಿಗಮದ ಸೇವಾ ಕೇಂದ್ರಗಳಿಗೆ ಮುಂದಿನ 10 ದಿನಗಳೊಳಗೆ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರ ಪೂರೈಸಲಾಗುವುದು. ಗ್ರಾಹಕರು ನಿಗಮದ ಯಾವುದೇ ಸೇವೆ ಸಂಬಂಧಿಸಿ ಬಿಲ್ ಪಾವತಿ ಸಂದರ್ಭ ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಇಲ್ಲಿ ನಗದು ರಹಿತ (ಕ್ಯಾಶ್‌ಲೆಸ್) ವ್ಯವಹಾರ ನಡೆಸಬಹುದು ಎಂದವರು ಮಾಹಿತಿ ನೀಡಿದರು.
ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತ ಉಪ ಮಹಾ ಪ್ರಬಂಧಕ ಗಣಪತಿ ಎಂ. ಭಟ್, ಜನರಲ್ ಮೆನೇಜರ್ ಅಶೋಕ್ ಕುಮಾರ್ ಅಗರ್‌ವಾಲ್, ಮಂಗಳೂರು ಟೆಲಿಕಾಂ ಜಿಲ್ಲೆಯ ಜನರಲ್ ಮೆನೇಜರ್ ಮಹಾ ಪ್ರಬಂಧಕ ಜಿ.ಆರ್. ರವಿ ಉಪಸ್ಥಿತರಿದ್ದರು.







