ಬೈಕ್ ಸ್ಕಿಡ್: ಯುವಕ ಸಾವು
ಭಟ್ಕಳ, ಡಿ.18: ವೇಗವಾಗಿ ಚಲಿಸುತ್ತಿದ್ದ ಮೋಟಾರ್ ಬೈಕ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಚಾಲಕ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಸಾಗರ ರಸ್ತೆಯ ರಾಜ್ಯ ಹೆದ್ದಾರಿ 50ರಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಬೈಕ್ ಚಾಲಕನನ್ನು ಹೌಸಿಂಗ್ ಕಾಲನಿಯ ಬೈತುಲ್ ಮುಸ್ಬಾ ನಿವಾಸಿ ಇಸ್ಮಾಯೀಲ್ ಎಂಬವರ ಮಗ ಮುಹಮ್ಮದ್ ಸುಹೈಲ್(26) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಮೃತ ಸುಹೈಲ್ ತನ್ನ ಇತರ ಮೂವರು ಸ್ನೇಹಿತರೊಂದಿಗೆ ಸಾಗರ ರಸ್ತೆಯಲ್ಲಿ ತಡರಾತ್ರಿ ಪಾರ್ಟಿ ಮುಗಿಸಿ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಜತೆಯಲ್ಲಿದ್ದ ಸಂಗಡಿಗರು ಘಟನಾ ಸ್ಥಳದಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿನ ವೈದ್ಯರು ಸುಹೈಲ್ ಮೃತಪಟ್ಟಿದ್ದಾರೆಂದು ಘೋಷಿಸಿದರು ಎನ್ನಲಾಗಿದೆ. ಅತಿವೇಗ ಹಾಗೂ ನಿರ್ಲಕ್ಷದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಸೈ ಮಂಜೇಶ್ವರ ವಿ.ಚಂದಾವರ ತನಿಖೆ ಕೈಗೊಂಡಿದ್ದಾರೆ.
Next Story





