ಪಾಲಕರ ಕನಸು ನನಸಾಗಿಸುವುದು ಮಕ್ಕಳ ಕರ್ತವ್ಯ: ಸುರೇಶ್

ಭಟ್ಕಳ, ಡಿ.18: ಪಾಲಕರು ತಮ್ಮ ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಶಿಕ್ಷಿತರನ್ನಾಗಿ ಮಾಡುತ್ತಾರೆ. ಆದ್ದರಿಂದ ಮಕ್ಕಳು ತಮ್ಮ ಪಾಲಕರ ಕನಸನ್ನು ನನಸಾಗಿಸಬೇಕು ಎಂದು ಭಟ್ಕಳ ಪೊಲೀಸ್ ವೃತ್ತಾಧಿಕಾರಿ ಸುರೇಶ್ ನಾಯಕ್ ಹೇಳಿದರು.
ಅವರು ರವಿವಾರ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಪಾಲಕರಿಗೆ ದುಃಖವನ್ನುಂಟು ಮಾಡುವ ಯಾವುದೇ ಕಾರ್ಯಗಳನ್ನು ಮಾಡಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಅಬ್ದುಲ್ ರಹ್ಮಾನ್ ಬಾತಿನ್, ಕ್ರೀಡೆ ಶಿಕ್ಷಣದ ಒಂದು ಭಾಗವಾಗಿದ್ದು, ಕ್ರೀಡೆಯಿಂದ ಉತ್ತಮ ಆರೋಗ್ಯ ಹಾಗೂ ಮನಸ್ಸು ವಿಕಸಿತಗೊಳ್ಳುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚು ಪಾಳ್ಗೊಳ್ಳಬೇಕು ಎಂದರು.
ವಿದ್ಯಾರ್ಥಿ ಖುಬೈಬ್ ಅಕ್ರಮಿಯ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಮುಹಮ್ಮದ್ ಅವೂನ್ ನದ್ವಿ ಸ್ವಾಗತಿಸಿದರು. ಅಬ್ದುಲ್ ರಷೀದ್ ಧನ್ಯವಾದ ಅರ್ಪಿಸಿದರು. ಅಬ್ದುಲ್ ಹಫೀಝ್ ಹಾಗೂ ಅಬ್ದುಲ್ ರಷೀದ್ ಮಿರ್ಜಾನಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಶಬ್ಬೀರ್ ಅಹ್ಮದ್ ದಫೆದಾರ್ ಸೇರಿದಂತೆ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.





