ಮುಸ್ಲಿಂ, ದಲಿತರು ಒಗ್ಗೂಡಿ ಹಕ್ಕುಗಳಿಗಾಗಿ ಹೋರಾಡೋಣ: ಭಾಸ್ಕರ್

ಮಂಗಳೂರು, ಡಿ. 17: ಅಲ್ಪಸಂಖ್ಯಾತರ ಹಕ್ಕುಗಳನ್ನು ಪಡೆಯಲು ಮುಸ್ಲಿಮರು ಮತ್ತು ದಲಿತರು ಒಗ್ಗೂಡಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಬೆಂಗಳೂರು ಅಂಬೇಡ್ಕರ್ ವಾದಿಯ ಬಿ.ಆರ್.ಭಾಸ್ಕರ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ.ಕ. ಜಿಲ್ಲಾ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ಮಿನಿ ವಿಧಾನಸೌಧ ಬಳಿಯ ಕರಾವಳಿ ಸಭಾಭವನದಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದಲಿತರು, ಮುಸ್ಲಿಮರು ಹಾಗೂ ಇತರ ಹಿಂದುಳಿದವರು ಅಲ್ಪಸಂಖ್ಯಾತರು ಎಂದು ಕರೆಯುವುದಕ್ಕೆ ನನ್ನ ವಿರೋಧವಿದೆ. ಅಲ್ಪಸಂಖ್ಯಾತರ ಬದಲಾಗಿ ಸ್ವಲ್ಪ ಸಂಖ್ಯಾತರು ಎಂದು ಕರೆದರೆ ಒಪ್ಪಿಕೊಳ್ಳಬಹುದು. ಮುಸ್ಲಿಮರು ಅಥವಾ ದಲಿತರು ಪ್ರತ್ಯೇಕವಾಗಿ ಗುರುತಿಸಿಕೊಂಡು ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಫಲ ನೀಡದು. ಕೇವಲ ಕನಸಿನ ಗೋಪುರಗಳನ್ನು ಕಟ್ಟಿಕೊಳ್ಳಬಹುದು. ಆ ಕನಸನ್ನು ನನಸು ಮಾಡಬೇಕಾದರೆ ದಲಿತರು ಮತ್ತು ಮುಸ್ಲಿಮರು ಒಗ್ಗೂಡಬೇಕಾಗಿದೆ ಎಂದು ಭಾಸ್ಕರ್ ಪ್ರಸಾದ್ ಹೇಳಿದರು.
ದೇಶದ ಜನಸಂಖ್ಯೆಯಲ್ಲಿ ಶೇ. 39ರಷ್ಟಿರುವ ಅಲ್ಪಸಂಖ್ಯಾತರಿಗೆ ಅಧಿಕಾರವನ್ನು ಹಿಡಿಸಲು ಸಾಧ್ಯವಿದೆ. ಪ್ರತ್ಯೇಕ ಗುರುತಿಸಲ್ಪಟ್ಟಿರುವ ಎಲ್ಲಾ ಸಮುದಾಯದವರನ್ನು ಒಂದೆಡೆ ಸೇರಿಸಿ ಅವರಿಗೆ ಸದ್ಯ ರಾಜಕೀಯ ಸ್ಥಿತಿ-ಗತಿಯ ಬಗ್ಗೆ ಮನವರಿಕೆ ಮಾಡಬೇಕಾದ ಕೆಲಸ ಆಗಬೇಕಾಗಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯವಿಲ್ಲ. ಕೇವಲ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಈ ಪಕ್ಷಗಳಿಂದ ಇನ್ನಾದರೂ ನಾವು ಪಾಠ ಕಲಿಯಬೇಕಾಗಿದೆ. ಆದ್ದರಿಂದ ಅಲ್ಪಸಂಖ್ಯಾತರೆಲ್ಲರೂ ಒಟ್ಟಾದರೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿದೆ ಎಂದರು.







