ಪಡುಬಿದ್ರೆಯಲ್ಲಿ ಆಕ್ಯುಪ್ರೆಶರ್ ಚಿಕಿತ್ಸಾ ಶಿಬಿರ

ಪಡುಬಿದ್ರೆ, ಡಿ.18: ಪ್ರಾಕೃತಿಕ ಚಿಕಿತ್ಸೆಯ ಭಾಗವಾಗಿರುವ ಆಕ್ಯುಪ್ರೆಶರ್ ಚಿಕಿತ್ಸಾ ಪದ್ಧತಿಯಿಂದ ಯಾವುದೇ ಔಷಧೋಪಚಾರ ಗಳಿಲ್ಲದೆ ವ್ಯಾದಿಗಳನ್ನು ನಿವಾರಿಸಬಹುದು. ಈ ಚಿಕಿತ್ಸಾ ವಿಧಾನವನ್ನು ಋಷಿಮುನಿಗಳು ಕಂಡುಹಿಡಿದಿದ್ದಾರೆ ಎಂದು ರಾಜಸ್ತಾನದ ಡಾ.ರಾಮ ಮನೋಹರ ಲೋಹಿಯಾ ಆರೋಗ್ಯ ಸಂಸ್ಥಾನದ ಡಾ.ಪ್ರಕಾಶ್ ಜಾಕರ್ ಹೇಳಿದರು. ಪಡುಬಿದ್ರೆ ರೋಟರಿ ಕ್ಲಬ್, ದ.ಕ. ಜಿಲ್ಲಾ ಗೊಡ್ಡ ಸಮಾಜ ಸೇವ ಸಂಘ ಸಂಯುಕ್ತಾಶ್ರಯದಲ್ಲಿ ಪಡುಬಿದ್ರೆಯ ಕಲ್ಲಟ್ಟೆಯ ಅಂಬೇಡ್ಕರ್ ಭವನದಲ್ಲಿ ಒಂದು ವಾರದ ಕಾಲ ಆಯೋಜಿಸಲಾದ ಆಕ್ಯುಪ್ರೆಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಆಕ್ಯುಪ್ರೆಶರ್ ಚಿಕಿತ್ಸಾ ಪದ್ಧತಿ ಪ್ರಾಕೃತಿಕ ಚಿಕಿತ್ಸೆಯ ಒಂದು ಭಾಗವಾಗಿದೆ. ಈ ಚಿಕಿತ್ಸಾ ಪದ್ಧತಿಯಿಂದ ದೇಹದ ಅತಿಬಾರ, ಮಧುಮೇಹ, ಅರ್ಧ ತಲೆನೋವು, ಕೀಲು ನೋವು, ಸಂವಾತ, ಪಿತ್ತವಾತ, ರಕ್ತದೊತ್ತಡ, ಬೆನ್ನುಹುರಿ, ಮೊಣಕಾಲು ನೋವು, ಅಜೀರ್ಣ, ಮಲಬದ್ಧತೆ ಮತ್ತಿತರ ಕಾಯಿಲೆಗಳನ್ನು ನಿವಾರಣೆ ಮಾಡಬಹುದು. ಈ ಚಿಕಿತ್ಸೆಯಿಂದ ಯಾವುದೇ ತೊಂದರೆಗಳಿಲ್ಲ ಎಂದವರು ನುಡಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ ಕಲ್ಲಟ್ಟೆ ಶ್ರೀಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ ಬಾಲ್ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಿಗೆ ಸೇವೆ ನೀಡುತ್ತಿರುವ ರೋಟರಿ ಕ್ಲಬ್‌ನ ಸೇವೆ ಶ್ಲಾಘನಾರ್ಹ ಎಂದು ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ರಾಮಕೃಷ್ಣ ಆಚಾರ್ಯ ಶಿಬಿರಕ್ಕೆ ಚಾಲನೆ ನೀಡಿದರು.
ದ.ಕ. ಜಿಲ್ಲಾ ಗೊಡ್ಡ (ದಲಿತ) ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಮಾಜಿ ಅಧ್ಯಕ್ಷ ಸಂಜೀವ ಮಾಸ್ಟರ್, ಡಾ.ಟಿ.ಕೆ.ಚೌದರಿ, ಗ್ರಾಪಂ ಸದಸ್ಯ ಬುಡಾನ್ ಸಾಹೇಬ್, ರೋಟರಿ ಕ್ಲಬ್ ಕಾರ್ಯದರ್ಶಿ ಕರುಣಾಕರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿದಿನ ಕಲ್ಲಟ್ಟೆಯ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಶಿಬಿರವು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







