‘ಸಾಹಿತ್ಯ ಅನುಭವಕ್ಕೆ ನಿಷ್ಠರಾಗಿರುವುದು ಅವಶ್ಯ’
ವಿದ್ಯಾರ್ಥಿ ಕವಿಗೋಷ್ಠಿ ಸಮಾರೋಪ

ಪುತ್ತೂರು, ಡಿ.18: ಹೊರಾಂಗಣದ ಬದುಕು ಕವಿಯಾದವನಿಗೆ ಬೇಕು. ಒಂದು ಹೆಜ್ಜೆ ಹೊರಕ್ಕೆ ಬೀಳಬೇಕು, ಆಗ ಅವನಿಗೆ ಕವನ ಅರ್ಥವಾಗುತ್ತದೆ. ಆಗ ಅವನದೇ ಆದ ಅನುಭವ ಹೊರಬರುತ್ತದೆ. ಅನ್ನಿಸಿದಾಗ, ಬರೆದಾಗ ಅದು ಕವನವೇ ಆಗಿರುತ್ತದೆ. ಅನುಭವಕ್ಕೆ ನಿಷ್ಠರಾಗಿರುವುದು ಅವಶ್ಯ ಎಂದು ಸಾಹಿತಿ ಪ್ರಕಾಶ್ ದೋಳ್ಪಾಡಿ ಹೇಳಿದರು.
ಅವರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರವಿವಾರ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ಕವಿಗೋಷ್ಠಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂತೆಯೊಳಗಿದ್ದು ಸಂತೋಷವನ್ನು ಸೃಷ್ಟಿಸಬೇಕಾಗುತ್ತದೆ. ಆಗ ನಮಗೆ ಹೊಸ ಮಾತು ಹೊರ ಬರುತ್ತದೆ. ಕವಿ ಮತ್ತು ಯೋಗಿಯ ಮನಸ್ಸು ಬಹಳ ಹತ್ತಿರ. ಮಿಡಿತ ಮತ್ತು ಸಂವೇದನೆ ನಮ್ಮನ್ನು ಒಳ್ಳೆಯ ಕವಿತೆಗಳನ್ನು ಬರೆಸಲಿ. ಕನ್ನಡವನ್ನು ಉಳಿಸೋಣ ಎಂದು ಹೇಳಿದರು. ಲಯ ಮತ್ತು ಛಂದಸ್ಸು ಅತ್ಯಂತ ಅನಿವಾರ್ಯ ಮತ್ತು ಇದರಿಂದ ಕನ್ನಡ ಸಾಹಿತ್ಯ ಆಶಾದಾಯಕ ವಿಚಾರ ಎನ್ನಬಹುದು ಎಂದರು. ಹೊರಪ್ರಪಂಚದ ಅನುಭವಕ್ಕೆ ಕವನಗಳು ಅತೀ ಮುಖ್ಯ. ಭಾಷೆಯ ಒಳಗಿರುವ ಸಂಗೀತವನ್ನು ನಮಗೆ ಅರ್ಥೈಸಿಕೊಂಡು ಮತ್ತು ಅತ್ಯಂತ ಸೃಜನಶೀಲವಾಗಿ ವ್ಯಕ್ತಪಡಿಸಿದ್ದಾರೆ ಎಂದು ನಾಯಕರನ್ನು ಹಾಡಿ ಹೊಗಳಿದರು. ಇಂತಹ ಕಾರ್ಯಕ್ರಮದಿಂದ ಸಾಹಿತ್ಯಕ್ಕೆ ಮಹಿಳೆಯರು ಹೊರ ಜಗತ್ತಿನಲ್ಲಿ ಹೊರಬರುತ್ತಿದ್ದಾರೆ ಎಂಬುದು ಸಣ್ಣ ಸೂಚನೆ ಎಂದೇ ಹೇಳಬಹುದು ಎಂದು ಪ್ರಕಾಶ್ ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಜೇಶ್ ದೋಳ್ಪಾಡಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಐತ್ತಪ್ಪನಾಯ್ಕಾ, ಪುತ್ತೂರು ಪಾಂಡುರಂಗ ನಾಯಕ್, ಯಂ.ದತ್ತಾತ್ರೇಯ ರಾವ್ ಮತ್ತು ಜಗದೀಶ್ ಆಚಾರ್ಯ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಶ್ರೀನಾಥ್, ಕಸಾಪದ ಡಾ. ಎಚ್.ಜಿ. ಶ್ರೀಧರ್ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್‌ನ ಡಾ.ಎಚ್.ಜಿ. ಶ್ರೀಧರ್ ವಂದಿಸಿದರು. ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪುಷ್ಪಾವತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.







