ವೀಸಾ ಇಲ್ಲದೆಯೇ ಭಾರತ ಪ್ರವೇಶಿಸಿದ ಉಬರ್ ಸಿಇಒ
ಗಡಿಪಾರಿನಿಂದ ಬಚಾವಾಗಿದ್ದು ಹೇಗೆ?

ಹೊಸದಿಲ್ಲಿ, ಡಿ.1: ಉಬರ್ ಸಹಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟ್ರಾವಿಸ್ ಕಲನಿಕ್ ಅವರು ವೀಸಾ ಇಲ್ಲದೇ ಭಾರತಕ್ಕೆ ಆಗಮಿಸಿ ಮುಜುಗರಪಟ್ಟ ಘಟನೆ ಬೆಳಕಿಗೆ ಬಂದಿದೆ. ಈ ಹಂತದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ದೇಶದಿಂದ ಗಡಿಪಾರಾಗುವ ಸಂಕಷ್ಟದದಿಂದ ಪಾರಾದರು.
ಕಲನಿಕ್ ಅವರು, ಜನವರಿ 16ರ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಮುಂಜಾನೆ ಬೀಜಿಂಗ್‌ನಿಂದ ಬಂದಿಳಿದಾಗ ಸೂಕ್ತ ವೀಸಾ ಇಲ್ಲದಿರುವುದು ಅವರ ಗಮನಕ್ಕೆ ಬಂತು. ತಕ್ಷಣ ಗೃಹ ಕಾರ್ಯದರ್ಶಿ ಹಾಗೂ ಗುಪ್ತಚರ ವಿಭಾಗದ ನಿರ್ದೇಶಕರು ಸಂಬಂಧಪಟ್ಟವರ ಜತೆ ಮಾತನಾಡಿ, ದೇಶದ ಒಳಕ್ಕೆ ಬರಲು ವ್ಯವಸ್ಥೆ ಕಲ್ಪಿಸಿದರು. ನೀತಿ ಆಯೋಗ ಆಯೋಜಿಸಿದ್ದ ಸಾರ್ವಜನಿಕ ಸಂದರ್ಶನದಲ್ಲಿ ಈ ಘಟನೆಯನ್ನು ಕಲನಿಕ್ ಬಣ್ಣಿಸಿದರು.
"ವೀಸಾದಲ್ಲಿ ಈ ದಿನಾಂಗಳಿರುತ್ತವೆ. ಭಾರತದ ವೀಸಾದಲ್ಲಿ ಇದು ಇತರ ದೇಶಗಳ ವೀಸಾಗಳಿಗೆ ತದ್ವಿರುದ್ಧವಾಗಿದೆ. ಅಮೆರಿಕದಲ್ಲಿ ನವೆಂಬರ್ 12ನ್ನು 11/12 ಎಂದು ನಮೂದಿಸಿದರೆ, ಭಾರತದಲ್ಲಿ 12/11 ಎನ್ನಲಾಗುತ್ತದೆ. ಈ ತಪ್ಪು ತಿಳಿವಳಿಕೆಯಿಂದಾಗಿ ನಾನು ಬೀಜಿಂಗ್‌ನಿಂದ ದಿಲ್ಲಿಗೆ ವೀಸಾ ಇಲ್ಲದೇ ಆಗಮಿಸಿದ್ದೆ. ಇದು ನಿಜಕ್ಕೂ ಮುಜುಗರದ ಸಂಗತಿ" ಎಂದು ಹೇಳಿದರು.
ಕಾಂತ್ ಅವರು ಈ ಸಂದರ್ಭದಲ್ಲಿ ನೆರವಿಗೆ ಬಂದರು. ವಾಸ್ತವವಾಗಿ ನಾನು ದೇಶ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟದ್ದು ಅಮಿತಾಬ್. ಡಿಐಪಿಪಿ ಕಾರ್ಯದರ್ಶಿಯಾಗಿದ್ದ ಕಾಂತ್, ನಸುಕಿನ 2.30ಕ್ಕೆ ಏಳಬೇಕಾಯಿತು ಎಂದು ನೆನಪಿಸಿಕೊಂಡರು.
"ಅವರನ್ನು ವಾಪಾಸು ವಿಮಾನಕ್ಕೆ ಕಳುಹಿಸಿ, ಚೀನಾಗೆ ಹಿಂದಿರುಗುವಂತೆ ಸೂಚಿಸಬೇಕಿತ್ತು. ಆದರೆ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ಅವರು, ದೇಶಕ್ಕೆ ಬರಲು ನಾವು ಅವಕಾಶ ಮಾಡಿಕೊಟ್ಟೆವು" ಎಂದು ಕಾಂತ್ ವಿವರಿಸಿದರು.







