ಜ್ಯೂನಿಯರ್ ವಿಶ್ವಕಪ್ ವಿಜಯದ ಹಿಂದಿನ ’ವಿಫಲ’ ಆಟಗಾರನ ತರಬೇತಿ
ಇಲ್ಲೊಂದು ಚಕ್ ದೇ ಇಂಡಿಯಾ!

ಹೊಸದಿಲ್ಲಿ, ಡಿ.19: "ನೀವು ಆಟಗಾರನಾಗಿ, ತರಬೇತುದಾರನಾಗಿ ನಿರೀಕ್ಷಿತ ಸಾಧನೆ ಮಾಡಿಲ್ಲ ಎನಿಸುತ್ತದೆಯೇ" ಎಂದು ಪತ್ರಕರ್ತರಿಂದ ಆರು ವಾರಗಳ ಹಿಂದೆ ಪ್ರಶ್ನೆ ಎದುರಾದಾಗ ಭಾರತದ ಕಿರಿಯರ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ಅವರ ತಕ್ಷಣದ ಪ್ರತಿಕ್ರಿಯೆ, "ನೀವು ಪ್ರಮುಖ ಪ್ರಶ್ನೆ ಎತ್ತಿದ್ದೀರಿ" ಎಂದಾಗಿತ್ತು. ಹೀಗೆ ಹೇಳುತ್ತಿದ್ದಂತೆಯೇ ಕಣ್ಣೀರು ಗಲ್ಲಗಳಲ್ಲಿ ಹರಿಯುತ್ತಿತ್ತು. 1998ರಲ್ಲಿ ರಾಷ್ಟ್ರೀಯ ತಂಡದಿಂದ ಹೊರಹಾಕಲ್ಪಟ್ಟು, ಕಿರಿಯರ ತಂಡದ ಕೋಚ್ ಆಗುವ ಸಂದರ್ಭದಲ್ಲಿ, ಸ್ವೀಕರಿಸಿದ ಪ್ರತಿಜ್ಞೆಯನ್ನು ಈ ಹಂತದಲ್ಲಿ ಅವರು ಬಹಿರಂಗಪಡಿಸಿದರು.
"ನಾನು ಒಲಿಂಪಿಯನ್ ಆಗಲಿಲ್ಲ. ಆದರೆ ನಾನು ಒಲಿಂಪಿಯನ್‌ಗಳನ್ನು ಮತ್ತು ವಿಶ್ವ ಚಾಂಪಿಯನ್ನರನ್ನು ಸಿದ್ಧಪಡಿಸುತ್ತೇನೆ ಹಾಗೂ ದೇಶ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ವಿಶ್ವಕಪ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರುವುದನ್ನು ನಾನು ನೋಡಿಲ್ಲ. ಈ ಬಾರಿ ನೋಡಲೇಬೇಕು. ಭಾರತ ವಿಶ್ವಕಪ್ ಎತ್ತುವುದನ್ನು ನೋಡಲು ನಾನು 22 ವರ್ಷದ ಕಾಲ ಶ್ರಮಿಸಿದ್ದೇನೆ"
ಇದೀಗ ಅವರ ಬಂಡವಾಳ ಪ್ರತಿಫಲ ತಂದುಕೊಟ್ಟಿದೆ. ಬೆಲ್ಜಿಯಂ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಕಿರಿಯರ ಹಾಕಿ ತಂಡ ಹರಜೀತ್ ಸಿಂಗ್ ನೇತೃತ್ವದಲ್ಲಿ ವಿಶ್ವಕಪ್‌ಗೆ ಮುತ್ತಿಕ್ಕುವ ಮೂಲಕ ಈ ಕನಸು ನನಸಾಗಿದೆ. ಅತಿಥೇಯ ದೇಶವೊಂದು ವಿಶ್ವಕಪ್ ಗೆದ್ದದ್ದು ಕೂಡಾ ಇದೇ ಮೊದಲು. 2014ರ ಏಪ್ರಿಲ್‌ನಲ್ಲಿ ಕಚ್ಚಾ ಪ್ರತಿಭೆಗಳನ್ನು ಶೋಧಿಸಿ, ಸೂಕ್ತ ತರಬೇತಿ ನೀಡಿ, ಇದೀಗ ಈ ಅಪೋಘ ಸಾಧನೆ ಮಾಡಿದ್ದರ ಹಿಂದೆ ತರಬೇತಿದಾರರ ಅಪಾರ ಶ್ರಮ ಅಡಗಿದೆ. ಈ ತಂಡ ಇದಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದೆ. ಎರಡು ತಿಂಗಳ ಹಿಂದೆ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಅವಧಿಯಲ್ಲಿ ಎರಡನೆ ಗೋಲ್‌ಕೀಪರ್ ಕೃಷ್ಣ ಪಾಠಕ್ ತಮ್ಮ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಲು ಆಗಲಲ್ಲ. ತಂಡದ ಸದಸ್ಯರು ಎಲ್ಲ ಪ್ರತಿಕೂಲಗಳನ್ನು ಎದುರಿಸಿಯೂ ಈ ಅಮೋಘ ಸಾಧನೆ ಮಾಡಿದ್ದಾರೆ. ಇವರೆಲ್ಲರ ಏಕೈಕ ಗುರಿ ಇದ್ದುದು ವಿಶ್ವಕಪ್ ಗೆಲ್ಲುವುದು.
ಇದು ಏಕಾಏಕಿ ಸಾಧನೆಯಲ್ಲ. ಕಳೆದ ವರ್ಷ ಈ ತಂಡ ಏಷ್ಯಾ ಕಪ್ ಗೆದ್ದುಗೊಂಡಿತ್ತು. ಈ ಟೂರ್ನಿಗೆ ಪೂರ್ವಭಾವಿಯಾಗಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಾಲ್ಕು ದೇಶಗಳ ಟೂರ್ನಿಯನ್ನೂ ಗೆದ್ದಿತ್ತು. ಕಳೆದ ಎಂಟು ವರ್ಷಗಳಲ್ಲಿ ಭಾರತ ಹಾಕಿ ತಂಡ ಅಮೋಘ ಸಾಧನೆ ತೋರುತ್ತಿದೆ. ಬೀಜಿಂಗ್ ಒಲಿಂಪಿಕ್ಸ್‌ಗೆ 2008ರಲ್ಲಿ ಅರ್ಹತೆ ಸಂಪಾದಿಸಲೂ ವಿಫಲವಾಗಿತ್ತು. ಆದರೆ ರಿಯೊ ಒಲಿಂಪಿಕ್ಸ್‌ನಲ್ಲಿ ಎಂಟನೆ ಸ್ಥಾನ ಗಳಿಸಿತು. ಹೀಗೆ ನಿಯತವಾಗಿ ಸಾಧನೆಯ ಹಾದಿಯಲ್ಲಿದೆ.







