ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಸಂದೇಶ ಸೂಕ್ತ ಪರಿಹಾರ: ಬೈತಾರ್ ಸಖಾಫಿ

ಸೌದಿ ಅರೇಬಿಯಾ, ಡಿ.19: ಆಧುನಿಕ ಚಿಂತಕರು, ಮಹಾನ್ ವ್ಯಕ್ತಿಗಳು ಕೂಡಾ ಪ್ರವಾದಿ ಮುಹಮ್ಮದ್(ಸ.ಅ)ರವರ ವ್ಯಕ್ತಿತ್ವವನ್ನು ಬಹಳ . ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿಯವರ ಸಂದೇಶದಲ್ಲಿ ಸೂಕ್ತ ಪರಿಹಾರವಿದೆ. ಪ್ರಸ್ತುತ ಸಂದೇಶವನ್ನು ಪಾಲಿಸುವುದರಲ್ಲಿ ನಾವು ಮುಂಚೂಣಿಯಲ್ಲಿರಬೇಕೆಂದು ಕರೆನೀಡಿದರು.
ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ಸೌದಿ ಅರೇಬಿಯಾ ಆಯೋಜಿಸಿದ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸೌದಿ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಬೈತಾರ್ ಯೂಸುಫ್ ಸಖಾಫಿ, ಪ್ರಚಲಿತ ಕಾಲದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಸಂದೇಶ ಹೆಚ್ಚು ಔಚಿತ್ಯ ಮತ್ತು ಮಹತ್ವವನ್ನು ಪಡೆದಿದೆ. ಆರೋಗ್ಯವಂತ ಸಮಾಜ, ನಿರ್ಭೀತಿಯ ಜೀವನ ಮತ್ತು ದೈನಂದಿನ ಅನುಕೂಲಾವಸ್ಥೆ ಈ ಮೂರು ಅವಸ್ಥೆಯು ಸಮಾಜದಲ್ಲಿರಬೇಕೆಂದು ಪ್ರವಾದಿ ಮುಹಮ್ಮದ್(ಸ.ಅ) ಬಯಸಿದರು ಮತ್ತು ಅದರ ಸಾತ್ಕಾರಕ್ಕಾಗಿ ಪ್ರಯತ್ನಿಸಿದರು ಎಂದು ಹೇಳಿದರು.
ನಂತರ ಮಾತನಾಡಿದ ಅಸ್ಸಯ್ಯದ್ ತುರಾಬ್ ಸಖಾಫ್ ತಂಙಳ್ ರವರು ಪ್ರವಾದಿ ಮುಹಮ್ಮದ್(ಸ.ಅ) ಜೀವನ ಚರಿತ್ರೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝಕರಿಯಾ ಸಅದಿ ವಹಿಸಿದ್ದರು. ಈ ಸಂದರ್ಭದಲ್ಲಿ ಇಶಾರ ಪತ್ರಿಕೆ ಅಭಿಯಾನವನ್ನು ತುರಾಬ್ ತಂಙಳ್ ರವರು ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಪಿಆರ್ ವಿಂಗ್ ಅಧ್ಯಕ್ಷ ಆಸಿಫ್ ಗೂಡಿನಬಳಿರವರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ನಂತರ "ಓ.ಖಾಲಿದ್-ಪ್ರಶಸ್ತಿ" ಯನ್ನು ಕೆ.ಸಿ.ಎಫ್ ಅಲ್ ಹಸ್ಸಾ ಖಜಾಂಜಿ ಅಬ್ದುಲ್ ರೆಹ್ಮಾನ್ ಕೈರಂಗಳ ಅವರಿಗೆ ತುರಾಬ್ ತಂಙಳ್ ಹಸ್ತಾಂತರಿಸಿದರು.
ದಮಾಮ್ ಕೆ.ಸಿ.ಎಫ್ ತಂಡದಿಂದ ಪ್ರವಾದಿಯವರ ಮದ್ಹ್ ಗಾನ ಹಾಡಿದರು. ಜೊತೆಗೆ ಮಕ್ಕಳ ಕಾರ್ಯಕ್ರಮ ನಡೆಯಿತು.
ಸಮಾಜಸೇವೆಯಲ್ಲಿ ಗುರುತಿಸಲ್ಪಟ್ಟ ಮುಹ್ಯದ್ದೀನ್ ಅಡ್ಡೂರ್ ಮತ್ತು ಅಶ್ಪಾಕ್ ಮಂಜೇಶ್ವರ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಐಎನ್ ಸಿ ಮುಖಂಡ ಎನ್.ಎಸ್ ಅಬ್ದುಲ್ಲಾ, ಮುಹಮ್ಮದ್ ಮಲೆಬೆಟ್ಟು, ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ, ದಮ್ಮಾಮ್ ಝೋನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ, ಸೌದಿ ಅರೇಬಿಯಾ ಪಿ.ಆರ್ ವಿಂಗ್ ಕನ್ವೀನರ್ ಅಶ್ರು ಬಜ್ಪೆ, ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ಅಲ್ ಹಸ್ಸಾ ನಾಯಕರಾದ ಝಕರಿಯಾ ಸಅದಿ, ಮುಹಿಯದ್ದೀನ್ ಅಡ್ಡೂರ್, ಡಿಕೆಎಸ್ಸಿ ನಾಯಕ ಅಝೀಝ್ ಆತೂರ್, ಐಸಿಎಫ್, ಆರ್ ಎಸ್ ಸಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಮದೀನಾ, ರಿಯಾದ್, ದಮ್ಮಾಮ್, ಅಲ್ ಖೋಬರ್, ಜುಬೈಲ್, ಅಲ್ ಹಸ್ಸಾದ ಸಕ್ರಿಯ ಕಾರ್ಯಕರ್ತರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇಸ್ಹಾಕ್ ಫಜೀರ್ ಕಾರ್ಯಕ್ರಮ ನಿರೂಪಿಸಿ, ಹಾರಿಸ್ ಕಾಜೂರ್ ಸ್ವಾಗತಿಸಿದರು. ಇಕ್ಬಾಲ್ ಗುಲ್ವಾಡಿ ವಂದಿಸಿದರು.







