ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ಆಂಬುಲೆನ್ಸ್ ಸೇವೆ

ತಿರುವನಂತಪುರ, ಡಿ.19: ರಸ್ತೆ ಅಪಘಾತದಲ್ಲಿ ದೇಶದಲ್ಲಿ ನಂ.3ನೆ ಸ್ಥಾನದಲ್ಲಿರುವ ಕೇರಳದಲ್ಲಿ ಬೈಕ್ ಆಂಬುಲೆನ್ಸ್ ಸೇವೆ ಆರಂಭಗೊಂಡಿದೆ.
ಶ್ರೀ ಸತ್ಯ ಸಾಯಿ ಸೇವಾ ಸಂಘಟನೆ(ಎಸ್‌ಎಸ್‌ಎಸ್‌ಎಸ್‌ಒ)ಯು "ಸಾಯಿ- ಎಯಿಡ್ -ಆನ್ -ವೀಲ್ಸ್’’ ಎಂಬ ಯೋಜನೆ ಆರಂಭಿಸಿದೆ
ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುತು ಚಿಕಿತ್ಸೆ ನೀಡಲು ಈ ಸೇವೆ ಆರಂಭಿಸಲಾಗಿದೆ. ಕೇರಳದಲ್ಲಿ ಮೊದಲ ಬಾರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 50 ಬೈಕ್ ಆಂಬುಲೆನ್ಸ್‌ಗಳು ಕಾರ್ಯಾಚರಣೆ ನಡೆಸಲಿದೆ.
ತರಬೇತಿ ಪಡೆದ ಯುವ ಸ್ವಯಂ ಸೇವಕರು ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಸೇವೆ ನೀಡಲಿದ್ದಾರೆ .ಅಪಘಾತ ನಡೆದ ಹತ್ತು ನಿಮಿಷಗಳ ಒಳಗಾಗಿ ಬೈಕ್ ಆಂಬುಲೆನ್ಸ್‌ಗಳು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಿದೆ ಎಂದು ಎಸ್‌ಎಸ್‌ಎಸ್‌ಎಸ್‌ಒ ಅಖಿಲ ಭಾರತ ಸಮಿತಿಯ ಅಧ್ಯಕ್ಷ ನಿಮೇಶ್ ಪಾಂಡ್ಯ ತಿಳಿಸಿದ್ದಾರೆ.
ಭಾರತದಲ್ಲಿ ಎಸ್‌ಎಸ್‌ಎಸ್‌ಎಸ್‌ಒ ಆರಂಭದಲ್ಲಿ ಕೇರಳದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಆರಂಭಗೊಳ್ಳಲಿದೆ. ತಿರುವನಂತಪುರದಿಂದ ಅಲಪ್ಪುಝ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಆಂಬುಲೆನ್ಸ್ ಗಳ ಸೇವೆ ಲಭ್ಯವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ಈ ಸೇವೆ ವಿಸ್ತರಣೆಗೊಳ್ಳಲಿದೆ ಎಂದು ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷ ಇ.ಮುಕುಂದನ್ ಮಾಹಿತಿ ನೀಡಿದ್ದಾರೆ.





