ಈ ನಟನ ಹೊಸ ಪಕ್ಷ ಉತ್ತರ ಪ್ರದೇಶದಲ್ಲಿ 390 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ !

ಮಥುರಾ, ಡಿ.19: ಚಿತ್ರ ನಟ ರಾಜಪಾಲ್ ಯಾದವ್ ಅವರ ಹೊಸ ಪಕ್ಷ ಸರ್ವ್ ಸಮಭಾವ್ ಪಾರ್ಟ್ ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು 403 ಕ್ಷೇತ್ರಗಳ ಪೈಕಿ 390 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಯಾದವ್ ಕಳೆದ 20-25 ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿದ ಅನೇಕ ಪಕ್ಷಗಳು ಆಶ್ವಾಸನೆಗಳನ್ನು ನೀಡಿವೆಯೇ ಹೊರತು ಜನರ ಬೇಡಿಕೆಗಳನ್ನು ಈಡೇರಿಸುವ ಗೋಜಿಗೇ ಹೋಗಿಲ್ಲ ಹಾಗೂ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಪ್ರಯತ್ನಗಳನ್ನೇ ಮಾಡಿಲ್ಲ ಎಂದು ದೂರಿದ್ದಾರೆ. ಇದೇ ಕಾರಣದಿಂದಾಗಿ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವಾಗಲೂ ಜನಹಿತವನ್ನು ಗಮನದಲ್ಲಿರಿಸಿಲ್ಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾಯಕರು ಹಾಗೂ ಜನರ ನಡುವೆ ಇರುವ ಅಂತರವನ್ನುಕೊನೆಗಾಣಿಸಲು ತಾವು ರಾಜಕೀಯಕ್ಕೆ ಬಂದಿರುವುದಾಗಿ ಹೇಳಿದ ಅವರು ತಾವು ಹೊಸ ಪಕ್ಷ ರಚಿಸಲು ಇದ್ದ ಕಾರಣಗಳನ್ನು ತಿಳಿಸುತ್ತಾ, ಯಾವುದೇ ಹೊಸ ಪಕ್ಷ ಸ್ಥಾಪಿಸಿದರೂ ಅದರದೇ ಭಾಷೆ ಆಡಬೇಕಾಗಿರುತ್ತದೆ ಹಾಗೂ ವೈಯಕ್ತಿಕ ಅಭಿಪ್ರಾಯಗಳಿಗೆ ಬೆಲೆಯಿಲ್ಲದ ಕಾರಣ ತಾನು ಈ ನಿರ್ಧಾರ ಕೈಗೊಂಡೆ ಎಂದು ಹೇಳಿದರು.
ಕೋಟಿಗಟ್ಟಲೆ ಹಣ ಸುರಿದು ಪಾರ್ಕ್ ನಿರ್ಮಿಸುವ ಅಧಿಕಾರಸ್ಥರು ಅದೇ ಸಮಯ ಜನಸಾಮಾನ್ಯರಿಗೆ ಅಗತ್ಯವಾದ ಉತ್ತಮ ರಸ್ತೆಗಳು ಹಾಗೂ ಇತರ ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿದರು.







