"ಭಾರತೀಯ ಸೇನೆಗೆ ಪ್ರಪ್ರಥಮ ಮುಸ್ಲಿಂ ಮುಖ್ಯಸ್ಥ ನೇಮಕ ತಪ್ಪಿಸಿದ ಮೋದಿ"
ಪಕ್ಷದ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ

ಹೊಸದಿಲ್ಲಿ, ಡಿ.19: ಇಬ್ಬರು ಹಿರಿಯ ಸೇನಾಧಿಕಾರಿಗಳ ಸೇವಾ ಜ್ಯೇಷ್ಠತೆಯನ್ನು ಬದಿಗೊತ್ತಿ ಭೂಸೇನಾ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ನೇಮಿಸಿರುವ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ವಿವಾದ ಉಂಟಾಗಿರುವ ನಡುವೆ ಹೊಸತೊಂದು ವಿವಾದ ಕಂಡು ಬಂದಿದೆ.
ಸೇನೆಯ ಪಶ್ಚಿಮ ವಿಭಾಗದ ಕಮಾಂಡರ್ ಲೆ.ಜ. ಪ್ರವೀಣ್ ಭಕ್ಷಿ ಮತ್ತು ದಕ್ಷಿಣ ವಿಭಾಗದ ಕಮಾಂಡರ್ ಪಿ.ಎಂ. ಹ್ಯಾರಿಸ್ ಅವರು ಲೆ.ಜ. ರಾವತ್ ಅವರಿಗಿಂತ ಜ್ಯೇಷ್ಠತೆಯಲ್ಲಿ ಶ್ರೇಷ್ಠರು. ಆದರೆ ಇಬ್ಬರಿಗೂ ಸೇನೆಯ ಉನ್ನತ ಹುದ್ದೆಗೇರುವ ಅವಕಾಶವನ್ನು ನಿರಾಕರಿಸಲಾಗಿದೆ.
ಪಿ.ಎಂ. ಹ್ಯಾರಿಸ್ ಅವರನ್ನು ನೇಮಕ ಮಾಡಿದರೆ ಸೇನೆಗೆ ಮೊದಲ ಮುಸ್ಲಿಂ ಮುಖ್ಯಸ್ಥನನ್ನು ಮಾಡಿದಂತಾಗುತ್ತದೆ. ಈ ಕಾರಣಕ್ಕಾಗಿ ಮೋದಿ ಅವರು ಹ್ಯಾರಿಸ್ ಗೆ ಅವಕಾಶ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಶೆಹಝಾದ್ ಪೊನ್ನಾವಲ್ಲಾ ಟ್ವೀಟ್ ಮಾಡಿದ್ದಾರೆ. ಆದರೆ ಶೆಹಝಾದ್ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಸೇನಾ ಮುಖ್ಯಸ್ಥನ ಹುದ್ದೆಗೆ ನೇಮಕದ ವಿಚಾರದಲ್ಲಿ ಧರ್ಮವನ್ನು ನೋಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಪ್ರತಿಕ್ರಿಯೆಸಿದ್ದಾರೆ.





