ನೋಟು ರದ್ದತಿಯಿಂದ ಹೀಗೊಂದು ಹೊಸ, ವಿಚಿತ್ರ ಉದ್ಯೋಗ ಸೃಷ್ಟಿ
ಬೇಕಾಗಿದ್ದಾರೆ!

ತಿರುಚ್ಚಿ,ಡಿ.19: ಕೇಂದ್ರ ಸರಕಾರ ನೋಟು ರದ್ದತಿ ನಿರ್ಧಾರ ಪ್ರಕಟಿಸಿದಾಗ, ಇದರ ಪರಿಣಾಮವಾಗಿ ಧೀರ್ಘಾವಧಿಯಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ, ಇದು ಸತ್ಯವಾಗಿದೆ. ಏಕೆ ಗೊತ್ತೇ? ಫ್ಯಾನ್ಸಿ ಜ್ಯುವೆಲ್ಲರಿ ಮಾರಾಟ ಮಳಿಗೆಯೊಂದು ಖಾಲಿ ಹುದ್ದೆ ಕುರಿತಂತೆ ನೀಡಿದ ಜಾಹೀರಾತು, "ಎಟಿಎಂಗಳಿಂದ ಹಣ ಪಡೆಯಲು ಎಟಿಎಂ ಹೊರಗೆ ಕಾಯಲು ಇಚ್ಛಿಸುವವರು ಬೇಕಾಗಿದ್ದಾರೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ" ಎಂದಿದೆ.
ಚತಿರಾಂ ಬಸ್ ನಿಲ್ದಾಣದಲ್ಲಿ ಈ ಜಾಹೀರಾತು ಇದೆ. ಉದ್ಯಮಿ ಆರ್.ಸತಾರ್ಥ್ ಎಂಬವರು ಈ ಜಾಹೀರಾತು ನೀಡಿದ್ದು, ಇವರು ತಿರುಚ್ಚಿಯ ಅಂಗಡಿಗಳಿಗೆ ಚಿನ್ನಲೇಪಿತ ಆಭರಣಗಳನ್ನು ಪೂರೈಕೆ ಮಾಡುವ ವಿತರಕರು.
"ನೋಟು ರದ್ದತಿ ಬಳಿಕ ನನಗೆ ಎಟಿಎಂಗಳ ಎದುರು ದೊಡ್ಡ ಸಾಲುಗಳಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ನನ್ನ ಇಡೀ ವಹಿವಾಟಿಗೆ ನೋಟು ರದ್ದತಿ ಪೆಟ್ಟು ನೀಡಿದೆ. ಕೆಲವೇ ಗ್ರಾಹಕರು ಉಳಿದುಕೊಂಡಿದ್ದಾರೆ. ಬಿಡುವಿಲ್ಲದ ಕ್ಷೇತ್ರಕಾರ್ಯ ಹಾಗೂ ಎಟಿಎಂಗಳ ಮುಂದೆ ಸಾಲು ನಿಂತು ನನಗೆ ಸಾಕಾಗಿದೆ" ಎಂದು ಹತಾಶೆ ವ್ಯಕ್ತಪಡಿಸುತ್ತಾರೆ.
ಆದರೆ ಈ ಜಾಹೀರಾತಿಗೆ ಸ್ಪಂದಿಸಿ, ಸ್ಥಳೀಯ ಯುವಕ ಶೇಖರ್ ಎಂಬಾತ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಅವರಿಗೆ ಸಂತೋಷವಿದೆ. 100 ರೂಪಾಯಿ ಮುಖಬೆಲೆಯ 25 ನೋಟುಗಳನ್ನು ತಂದುಕೊಟ್ಟರೆ ಆತನಿಗೆ 100 ರೂಪಾಯಿ ಕಮಿಷನ್ ನೀಡುವ ಷರತ್ತಿನ ಮೇಲೆ ಆತ ಕೆಲಸಕ್ಕೆ ಒಪ್ಪಿಕೊಂಡಿದ್ದಾನೆ!







