ಆಸೀಸ್ ವಿರುದ್ಧ ಸೋತರೂ ಇತಿಹಾಸ ನಿರ್ಮಿಸಿದ ಪಾಕಿಸ್ತಾನ

ಬ್ರಿಸ್ಬೇನ್, ಡಿ.19: ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 39 ರನ್‌ಗಳ ಅಂತರದಲ್ಲಿ ಸೋತರೂ, ಅತ್ಯಂತ ಕಠಿಣ ಸವಾಲನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಪಾಕಿಸ್ತಾನ ಇತಿಹಾಸ ನಿರ್ಮಿಸಿದೆ.
ಗಬ್ಬಾ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡ ಗೆಲುವಿಗೆ ಎರಡನೆ ಇನಿಂಗ್ಸ್‌ನಲ್ಲಿ 490 ರನ್‌ಗಳ ಕಠಿಣ ಸವಾಲು ಪಡೆದಿತ್ತು. ಆದರೆ ಪಾಕಿಸ್ತಾನ 450 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಪಾಕಿಸ್ತಾನ ಹೊಸ ದಾಖಲೆ ಬರೆದಿದೆ. ಒಂದು ವೇಳೆ ಪಾಕಿಸ್ತಾನ 490 ರನ್ ಮಾಡಿದ್ದರೆ ಈ ಗರಿಷ್ಠ ಸವಾಲನ್ನು ಬೆನ್ನಟ್ಟಿ ಜಯ ಗಳಿಸಿದ ವಿಶ್ವದ ಮೊದಲ ತಂಡವೆಂಬ ಹೊಸ ಇತಿಹಾಸ ಬರೆಯುತ್ತಿತ್ತು. ಆದರೆ ಈ ಅವಕಾಶ ವಂಚಿತಗೊಂಡಿದೆ.
ನಾಲ್ಕನೆ ದಿನದಾಟದಂತ್ಯಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಸದ್ ಶಫೀಕ್ ಸಾಹಸದ ನೆರವಿನಿಂದ ಪಾಕಿಸ್ತಾನ 8 ವಿಕೆಟ್‌ಗಳ ನಷ್ಟಕ್ಕೆ 382 ರನ್ ಗಳಿಸಿತ್ತು. ಅಂತಿಮ ದಿನ ಗೆಲ್ಲಲು 108 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.
ದಿನದಾಟದಂತ್ಯಕ್ಕೆ ಶಫೀಕ್ ಅಜೇಯ 100 ರನ್ (, 140 ಎಸೆತ, 10 ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಯಾಸಿರ್ ಶಾ ಅಜೇಯ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇಂದು ಪಾಕಿಸ್ತಾನಕ್ಕೆ ಈ ಮೊತ್ತಕ್ಕೆ 68 ರನ್ ಸೇರಿಸಲು ಸಾಧ್ಯವಾಗಿದೆ.
144.2ನೆ ಓವರ್‌ನಲ್ಲಿ ಶಫೀಕ್ 137 ರನ್ ಗಳಿಸಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ 33 ರನ್ ಗಳಿಸಿರುವ ಯಾಸೀರ್ ಶಾ ಅವರನ್ನು ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ರನೌಟ್ ಮಾಡುವುದರೊಂದಿಗೆ ಪಾಕಿಸ್ತಾನದ ಹೋರಾಟ ಅಂತ್ಯಗೊಂಡಿತು





