ಸರಕಾರದ ನಿರ್ಧಾರವನ್ನು ಬೆಂಬಲಿಸಿದ ಕಾಂಗ್ರೆಸ್ ಮುಖಂಡ!
ಸೇನಾ ಮುಖ್ಯಸ್ಥರ ನೇಮಕ ವಿವಾದ

ಹೊಸದಿಲ್ಲಿ, ಡಿ.19: ಇಬ್ಬರು ಹಿರಿಯ ಅಧಿಕಾರಿಗಳ ಸೇವಾ ಜ್ಯೇಷ್ಠತೆಯನ್ನು ಕಡೆಗಣಿಸಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಿರುವ ಮೋದಿ ಸರಕಾರದ ಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸತ್ಯವ್ರತ ಚತುರ್ವೇದಿ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
"ಸೇನಾ ಮುಖ್ಯಸ್ಥರ ನೇಮಕಾತಿ ವಿವಾದದಲ್ಲಿ ಎತ್ತಿರುವ ಪ್ರಶ್ನೆಗಳು ಸ್ವಾಗತಾರ್ಹವಲ್ಲ. ರಾಜಕೀಯ ಹಾಗೂ ಸೇನೆಯನ್ನು ವಿಲೀನ ಮಾಡುವುದಕ್ಕೆ ಅವಕಾಶವೇ ಇಲ್ಲ" ಎಂದು ಎಎನ್‌ಐ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು ಹೇಳಿದರು. "ಆಯ್ಕೆಯ ವಿಚಾರಕ್ಕೆ ಬಂದಾಗ ಕೇವಲ ಸೇವಾ ಜ್ಯೇಷ್ಠತೆಯಷ್ಟೇ ಮಾನದಂಡವಾಗಬಾರದು. ಸರಕಾರ ಈ ಬಗ್ಗೆ ಯೋಚಿಸಬೇಕು. ಕೇವಲ ಜ್ಯೇಷ್ಠತೆಯಷ್ಟೇ ಮಾನದಂಡವಾಗದೇ, ಇತರ ಗುಣಗಳನ್ನೂ ಪರಿಗಣಿಸಬೇಕು. ಈ ಎಲ್ಲ ಯೋಚನೆ ಮಾಡಿಯೇ ಸರಕಾರ ನಿರ್ಧಾರ ಕೈಗೊಂಡಿರಬೇಕು" ಎಂದು ಅಭಿಪ್ರಾಯಪಟ್ಟರು.
ರಾವತ್ ಆಯ್ಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚತುರ್ವೇದಿ ಹೇಳಿಕೆ ಅಚ್ಚರಿ ಮೂಡಿಸಿದೆ. ಜೆಡಿಯು ಕೂಡಾ ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದು, "ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಇದು ನೆನಪಿಸುತ್ತದೆ. ಆ ದಿನಗಳ ಮರಳಿ ಬರುತ್ತಿವೆ ಎನಿಸುತ್ತದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಟೀಕಿಸಿದ್ದಾರೆ.
ಆದರೆ ಬಿಜೆಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಉಗ್ರಗಾಗಮಿಗಳ ವಿರುದ್ಧದ ಹೋರಾಟದಲ್ಲಿ ಅವರಿಗೆ ಇರುವ ಅನುಭವದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಹೇಳಿದೆ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.







