ಮುಸ್ಲಿಮರ ಮತ ನಮಗೆ ಬೇಡ ಎಂದ ಬಿಜೆಪಿ ಸಂಸದ
.jpg)
ಹೊಸದಿಲ್ಲಿ, ಡಿ. 19 : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ಜನಪ್ರತಿನಿಧಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಶ್ಚಿಮ ದಿಲ್ಲಿಯ ಬಿಜೆಪಿ ಸಂಸದರಾದ ಪ್ರವೇಶ್ ವರ್ಮಾ ಅವರು ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯಲ್ಲಿ ನಡೆದ ಪಕ್ಷದ ಯುವ ಸಮ್ಮೇಳನದಲ್ಲಿ ಮಾತನಾಡುತ್ತಾ "ಮುಸಲ್ಮಾನರು ಈ ಹಿಂದೆಯೂ ಬಿಜೆಪಿಗೆ ಮತ ನೀಡಿಲ್ಲ , ಇನ್ನು ಮುಂದೆಯೂ ನೀಡುವುದಿಲ್ಲ " ಎಂದು ಹೇಳಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಕಾರ್ಯಕ್ರಮದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ವರ್ಮಾ ಅವರು " ಬಿಜೆಪಿ ದೇಶಭಕ್ತ ಪಕ್ಷವಾಗಿರುವುದರಿಂದ " ಮುಸಲ್ಮಾನರು ಈ ಹಿಂದೆ ಎಂದೂ ಬಿಜೆಪಿಗೆ ಮತ ಹಾಕಿಲ್ಲ, ಇನ್ನು ಮುಂದೆಯೂ ಹಾಕುವುದಿಲ್ಲ " ಎಂದು ಹೇಳಿದ್ದಾರೆ. ಈಗ ಈ ಹೇಳಿಕೆ ಪಕ್ಷದ ಪಾಲಿಗೆ ನುಂಗಲಾರ ತುತ್ತಾಗಿ ಪರಿಣಮಿಸಿದೆ.
ರಾಮ ಮಂದಿರದ ವಿಷಯ ಪ್ರಸ್ತಾಪಿಸಿದ ವರ್ಮಾ ಅವರು " ರಾಮ ಮಂದಿರ ಖಂಡಿತ ನಿರ್ಮಾಣವಾಗಲಿದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ " ಎಂದು ಹೇಳಿದರು. ಪ್ರಚೋದನಕಾರಿ ಮಾತು ಆಡಲು ನಿರ್ಧರಿಸಿಯೇ ಬಂದವರಂತೆ ಮುಂದುವರಿದ ವರ್ಮಾ " ಪ್ರತಿಯೊಬ್ಬ ಭಯೋತ್ಪಾದಕ ಮುಸ್ಲಿಂ ಆಗಿರುವುದು ಹೇಗೆ ? " ಎಂದು ಪ್ರಶ್ನಿಸಿದರು.
ಈಗ ವರ್ಮಾ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ. ಇಂತಹ ಹೇಳಿಕೆ ನೀಡಿ ವಾತಾವರಣ ಹಾಳು ಮಾಡುವುದೇ ಬಿಜೆಪಿ ಉದ್ದೇಶ ಎಂದು ಇತರ ಪಕ್ಷಗಳು ಆರೋಪಿಸಿವೆ . ಸಮಾಜವಾದಿ ಹಾಗು ಬಹುಜನ ಸಮಾಜವಾದಿ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ವರ್ಮಾ ಕ್ಷಮೆ ಕೋರಬೇಕು ಎಂದು ಆಗ್ರಹಿಸಿವೆ.
ಬಿಜೆಪಿಯೂ ತನ್ನ ಸಂಸದ ಹೇಳಿಕೆಯಿಂದ ಜಾರಿಕೊಳ್ಳುವ ಪ್ರಯತ್ನದಲ್ಲಿದೆ. ಈ ಬಗ್ಗೆ ಕೇಂದ್ರ ಸಚಿವ, ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಬಳಿ ಕೇಳಿದಾಗ "ಇದು ನನ್ನ ಗಮನಕ್ಕೇ ಬಂದಿಲ್ಲ. ಬಿಜೆಪಿ ಎಂದು ದೇಶಭಕ್ತ ಪಕ್ಷವಾಗಿದ್ದು ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಪಕ್ಷವಾಗಿದೆ" ಎಂದವರು ನುಣುಚಿಕೊಂಡರು.







