ಬೆಳ್ತಂಗಡಿ: ಕೋಟಿ ಚೆನ್ನಯ ಕ್ರೀಡಾ ಕೂಟ ಸೋಮನಾಥ ಬಂಗೇರಿಂದ ಚಾಲನೆ

ಬೆಳ್ತಂಗಡಿ, ಡಿ.19: ತಾಲೂಕಿನಲ್ಲಿ ಬಿಲ್ಲವ ಸಮಾಜ ಅತೀ ಹೆಚ್ಚು ಸಂಖ್ಯೆಯಲ್ಲಿದ್ದು ಈ ಸಮಾಜದ ಯುವಕರ ಕ್ರೀಡಾ ಶಕ್ತಿ ಪ್ರದರ್ಶನ, ಪ್ರೋತ್ಸಾಹ ಹಾಗೂ ವಾರ್ಷಿಕ ಬಿಲ್ಲವ ಕ್ರೀಡಾ ಜಾತ್ರೋತ್ಸವ ನಡೆಸುವ ಉದ್ದೇಶದಿಂದ ಏಳು ವರ್ಷಗಳ ಹಿಂದಿನಿಂದ ಕೋಟಿ ಚೆನ್ನಯ ಕ್ರೀಡಾ ಕೂಟ ನಡೆಸುತ್ತಿದ್ದು ತಾಲೂಕಿನ ಬಿಲ್ಲವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಪ್ರಗತಿಪರ ಕೃಷಿಕ ಉದ್ಯಮಿ ಸೋಮನಾಥ ಬಂಗೇರ ವರ್ಪಾಲೆ ಹೇಳಿದ್ದಾರೆ.
ಅವರು ಭಾನುವಾರ ಬೆಳ್ತಂಗಡಿ ಸ.ಪ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ರಿ. ಬೆಳ್ತಂಗಡಿ ಇದರ ಆಶ್ರಯದಲ್ಲಿ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಮಹಿಳಾ ಬಿಲ್ಲವ ವೇದಿಕೆ ಸಹಕಾರದೊಂದಿಗೆ ನಡೆದ 7ನೆ ವರ್ಷದ ಕೋಟಿ ಚೆನ್ನಯ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ಗು. ನಾ. ಸ್ವಾ. ಸೇ. ಸಂಘದ ಅಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾ ಕೂಟಗಳಿಂದ ಸಮುದಾಯದ ನಡುವಿನ ಸಂಬಂಧಗಳು ಹೆಚ್ಚಾಗುವುದಲ್ಲದೆ ಬಿಲ್ಲವ ಯುವಕರಿಗೆ ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಗು. ನಾ. ಸೇವಾ. ಸಂಘದ ಕೋಶಾಧಿಕಾರಿ ಶೇಖರ್ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್, ಗು. ನಾ. ಸ್ವಾ. ಸೇವಾ ಸಂಘದ ಪ್ರದಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಉದ್ಯಮಿ ರವಿಪೂಜಾರಿ ಬರೆಮೇಲು ಉಜಿರೆ, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲ ಬೈಲು ಉಪಸ್ಥಿತರಿದ್ದರು.
ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಚಿದಾನಂದ ಇಡ್ಯ ಸ್ವಾಗತಿಸಿ, ಯುವ ಬಿಲ್ಲವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ.ಕೋಟ್ಯಾನ್ ವಂದಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಉಪಾಧ್ಯಕ್ಷ ಸ್ಮಿತೇಶ್ ಎಸ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







