ಆಗಸ್ಟಾ ವೆಸ್ಟ್‌ಲ್ಯಾಂಡ್: ಗಾಂಧಿ ಕುಟುಂಬದ ವಿರುದ್ಧ ಸಾಕ್ಷ್ಯ ಹೇಳಲು ಸಿಬಿಐನಿಂದ ಒತ್ತಡ
.jpg)
ಹೊಸದಿಲ್ಲಿ, ಡಿ. 19: ಆಗಸ್ಟಾವೆಸ್ಟ್‌ಲ್ಯಾಂಡ್ ಲಂಚ ಹಗರಣದಲ್ಲಿ ಗಾಂಧಿ ಕುಟುಂಬದ ವಿರುದ್ಧ ಸಾಕ್ಷ್ಯ ಹೇಳಲಿಕ್ಕಾಗಿ ಸಿಬಿಐ ಒತ್ತಡಹಾಕುತ್ತಿದ್ದು, ತನಗೂ ಗಾಂಧಿ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ತಾನು ಅವರಿಗೆ ಲಂಚ ನೀಡಿಲ್ಲ ಎಂದು ಹಗರಣದಲ್ಲಿ ಮಧ್ಯವರ್ತಿ ಎಂದು ಹೆಸರಿಸಲಾದ ಕ್ರಿಸ್ಟಿಯನ್ ಮೈಕಲ್ ಬಹಿರಂಗಪಡಿಸಿದ್ದಾರೆ. ಸದ್ಯ ದುಬೈಯಲ್ಲಿರುವ ಕ್ರಿಸ್ಟಿಯನ್ ಅಲ್ಲಿನ ರಾಷ್ಟ್ರೀಯ ದೈನಿಕಗಳಿಗೆ ನೀಡಿದ ಸಂದರ್ಶನದಲ್ಲಿ ಸಿಬಿಐಯ ಕುರಿತ ವಿವರಗಳನ್ನು ಬಯಲುಗೊಳಿಸುವ ಮೂಲಕ ಪ್ರಕರಣದಲ್ಲಿ ಹೊಸ ತಿರುವಿಗೆ ಕಾರಣರಾಗಿದ್ದಾರೆ.
ಸಿಬಿಐ ಈಗಾಗಲೆ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿ ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿಯನ್ನು ಬಂಧಿಸಿದೆ. ಯುಪಿಎ ಸರಕಾರ ನಡೆಸಿದ್ದ ಹೆಲಿಕಾಪ್ಟರ್ ಖರೀದಿಯ 3600 ಕೋಟಿ ರೂ. ವ್ಯವಹಾರದಲ್ಲಿ 411ಕೋಟಿ ರೂ. ಅಕ್ರಮ ನಡೆದಿದೆ ಎಂದು ದೂರನ್ನು ಸಿಬಿಐ ದಾಖಲಿಸಿಕೊಂಡಿತ್ತು. ಅಕ್ರಮ ಹಣದಲ್ಲಿ ಬಹುಪಾಲು ಭಾರತದ ರಾಜಕೀಯ ಕುಟುಂಬವೊಂದಕ್ಕೆ ಸಂದಾಯವಾಗಿದೆಎಂದು ಸಿಬಿಐ ವಾದಿಸುತ್ತಿದ್ದು, ಮಧ್ಯವರ್ತಿಗಳ ಡೈರಿಬರಹಗಳ ಆಧಾರದಲ್ಲಿ ಆರೋಪ ಹೊರಿಸುತ್ತಿದೆ. ಗಾಂಧಿ ಕುಟುಂಬದತ್ತ ಸಿಬಿಐ ಬೆರಳು ತೋರಿಸುತ್ತಿದ್ದು, ಇದರ ನಡುವೆ ಕ್ರಿಸ್ಟಿಯನ್ ಮೈಕಲ್‌ರಿಂದ ಹೊಸ ಹೇಳಿಕೆ ಹೊರಬಂದಿದೆ.
ಪ್ರತಿಪಕ್ಷದ ವಿರುದ್ಧ ಸಾಕ್ಷ್ಯ ನುಡಿಯಲಿಕ್ಕಾಗಿ ಕಳೆದ ಎರಡು ದಿವಸಗಳಿಂದ ಸಿಬಿಐ ಅಧಿಕಾರಿಗಳು ಭಾರೀ ಒತ್ತಡ ಹಾಕುತ್ತಿದ್ದಾರೆ. ತಾನು ಮಾಡದ ಕೆಲಸವನ್ನು ಹೇಳಬೇಕೆಂದು ಬಯಸುತ್ತಿದ್ದಾರೆಂದು ಕ್ರಿಸ್ಟಿಯನ್ ಮೈಕಲ್ ಹೇಳಿದ್ದಾರೆ. ಈ ರೀತಿ ಅವರು ದೇಶದ ಉನ್ನತ ತನಿಖಾ ಸಂಸ್ಥೆಯಾದ ಸಿಬಿಐ ನೈಜ ಮುಖವನ್ನು ಬಯಲಿಗೆ ತಂದಿದ್ದಾರೆ ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







