ಡಿಜಿಟಲ್ ವಹಿವಾಟು ನಡೆಸುವ ಸಣ್ಣವ್ಯಾಪಾರಿಗಳಿಗೆ ಕಡಿಮೆ ತೆರಿಗೆ

ಹೊಸದಿಲ್ಲಿ,ಡಿ.19: ನಗದುರಹಿತ ಆರ್ಥಿಕತೆಯನ್ನು ಉತ್ತೇಜಿಸುವ ಪ್ರಯತ್ನವಾಗಿ ಸರಕಾರವು, ಎರಡು ಕೋ.ರೂ.ವರೆಗೆ ವಹಿವಾಟು ಹೊಂದಿರುವ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ಬ್ಯಾಂಕಿಂಗ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಹಣವನ್ನು ಸ್ವೀಕರಿಸಿದರೆ ಅವರು ಪಾವತಿಸಬೇಕಾದ ತೆರಿಗೆಯ ಪ್ರಮಾಣವು ಕಡಿಮೆಯಾಗಲಿದೆ ಎಂದು ಸೋಮವಾರ ಹೇಳಿದೆ.
ಆದಾಯ ತೆರಿಗೆ ಕಾಯ್ದೆ,1961ರ ಹಾಲಿ ಕಲಂ 44 ಎಡಿ ಅಡಿ ಯಾವುದೇ ಉದ್ಯಮವನ್ನು ನಡೆಸುತ್ತಿರುವ, ವಾರ್ಷಿಕ ಎರಡು ಕೋ.ರೂ.ಅಥವಾ ಕಡಿಮೆ ವಹಿವಾಟು ಹೊಂದಿರುವ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ(ವ್ಯಕ್ತಿ,ಹಿಂದು ಅವಿಭಜಿತ ಕುಟುಂಬ ಅಥವಾ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆಯನ್ನು ಹೊರತುಪಡಿಸಿ ಪಾಲುದಾರಿಕೆ ಸಂಸ್ಥೆ) ತೆರಿಗೆ ಲೆಕ್ಕಾಚಾರಕ್ಕಾಗಿ ಒಟ್ಟು ವಹಿವಾಟಿನ ಶೇ.8ರಷ್ಟನ್ನು ಲಾಭವೆಂದು ಪರಿಗಣಿಸಲಾಗುತ್ತದೆ. 2016-17ನೇ ಸಾಲಿಗೆ ಬ್ಯಾಂಕಿಂಗ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ವಹಿವಾಟಿನ ಹಣವನ್ನು ಸ್ವೀಕರಿಸುವ ಇಂತಹ ವ್ಯಾಪಾರಿಗಳಿಗೆ ಅಂತಹ ಒಟ್ಟು ವಹಿವಾಟಿನ ಮೇಲೆ ಶೇ.8ರ ಬದಲು ಶೇ.6ರಂತೆ ಲಾಭವನ್ನು ಲೆಕ್ಕ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ನಗದುರೂಪದಲ್ಲಿ ನಡೆದ ವಹಿವಾಟಿಗೆ ಈಗಿನ ಶೇ.8ರ ದರದಲ್ಲಿಯೇ ಲಾಭವನ್ನು ಲೆಕ್ಕ ಹಾಕಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.
ಹಣಕಾಸು ಮಸೂದೆ,2017ರ ಮೂಲಕ ಈ ಸಂಬಂಧ ಕಾಯ್ದೆಗೆ ತಿದ್ದುಪಡಿಯನ್ನು ಮಾಡಲಾಗುವುದು ಎಂದು ಅದು ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







