ಗಡಿಗಳಲ್ಲಿ ನಿಯೋಜಿತ ಯೋಧೆಯರಿಗೆ ಹೆಚ್ಚಿನ ಸೌಲಭ್ಯ: ರಾಜನಾಥ ಸಿಂಗ್

ಹೊಸದಿಲ್ಲಿ,ಡಿ.19: ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುವ ಗಡಿ ಕಾವಲು ಠಾಣೆಗಳಿಗೆ ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಇಲ್ಲಿ ಹೇಳಿದರು.
ಅರೆ ಸೇನಾಪಡೆ ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ)ನ 53ನೇ ಸ್ಥಾಪನಾ ದಿನಾಚರಣೆಯಲ್ಲಿ ಗೌರವ ವಂದನೆಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ದೂರದ ಗಡಿ ಪ್ರದೇಶಗಳ ಠಾಣೆಗಳಲ್ಲಿ ಈಗಿರುವ ವ್ಯವಸ್ಥೆಗಳು ಕೊರತೆಯಿಂದ ಕೂಡಿರುವುದರಿಂದ ಅಲ್ಲಿ ಮಹಿಳೆಯರಿಗಾಗಿ ಹೆಚ್ಚಿನ ಸೌಲಭ್ಯಗಳು ಅಗತ್ಯವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ಗಡಿಗಳನ್ನು ರಕ್ಷಿಸುವ ಹೊಣೆಯನ್ನು ಹೊತ್ತಿರುವ ಎಸ್‌ಎಸ್‌ಬಿ, ಬಿಎಸ್‌ಎಫ್ ಮತ್ತು ಐಟಿಬಿಪಿ ತಮ್ಮ ಮಹಿಳಾ ಸಿಬ್ಬಂದಿಗಳನ್ನೂ ಗಡಿ ಠಾಣೆಗಳಲ್ಲಿ ನಿಯೋಜಿಸಿವೆ. ಕೆಲವು ವರ್ಷಗಳ ಹಿಂದೆ ಮೊದಲ ಬಾರಿಗೆ ಇಂತಹ ನಿಯೋಜನೆಗಳ ಬಳಿಕ ಈ ಪಡೆಗಳು ಠಾಣೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಿವೆ ಅಥವಾ ಹೊಸದಾಗಿ ಸೃಷ್ಟಿಸಿವೆಯಾದರೂ ಸಿಬ್ಬಂದಿಗಳು ಕೊರತೆಯ ಬಗ್ಗೆ ದೂರಿಕೊಳ್ಳುತ್ತಿದ್ದಾರೆ.
ನೇಪಾಲ ಮತ್ತು ಭೂತಾನ್‌ನೊಂದಿಗಿನ ಗಡಿಗಳ ರಕ್ಷಣೆಯಲ್ಲಿ ನಿರತ ತನ್ನ ಸಿಬ್ಬಂದಿಗಳಿಗೆ ನೆರವಾಗಲು ತನ್ನದೇ ಆದ ಗುಪ್ತಚರ ಘಟಕದ ಅಗತ್ಯವಿದೆ ಎಂಬ ಎಸ್‌ಎಸ್‌ಬಿಯ ಬಾಕಿಯುಳಿದಿರುವ ಪ್ರಸ್ತಾವನೆಯನ್ನು ತನ್ನ ಸಚಿವಾಲಯವು ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಿಂಗ್ ಈ ಸಂದರ್ಭ ಭರವಸೆ ನೀಡಿದರು.
1963ರಲ್ಲಿ ಸ್ಥಾಪನೆಗೊಂಡ ಎಸ್‌ಎಸ್‌ಬಿ 67,000 ಸಿಬ್ಬಂದಿಗಳನ್ನೊಳಗೊಂಡಿರುವ 67 ಕಾರ್ಯನಿರತ ಬಟಾಲಿಯನ್‌ಗಳನ್ನು ಹೊಂದಿದ್ದು, 1,751 ಕಿ.ಮೀ.ಉದ್ದದ ಭಾರತ -ನೇಪಾಲ ಗಡಿ ಮತ್ತು 699 ಕಿ.ಮೀ.ಉದ್ದದ ಭಾರತ-ಭೂತಾನ ಗಡಿಗಳನ್ನು ಕಾಯುತ್ತಿದೆ. ಜೊತೆಗೆ ಒಳನಾಡಿನಲ್ಲಿ ವಿವಿಧ ಆಂತರಿಕ ಭದ್ರತಾ ಕರ್ತವ್ಯಗಳನ್ನೂ ನಿರ್ವಹಿಸುತ್ತಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







