ನಾವು ಉನ್ನತ ಕೋರ್ಟ್ ಮೊರೆ ಹೋಗುತ್ತೇವೆ : ಯಾಸೀನ್ ಭಟ್ಕಳ ತಾಯಿಯಿಂದ ಪ್ರತಿಕ್ರಿಯೆ

ಭಟ್ಕಳ, ಡಿ.19: ಭಟ್ಕಳದ ಅಹ್ಮದ್ ಸಿದ್ದಿಬಾಪ ಯಾನೆ ಯಾಸೀನ್ ಭಟ್ಕಳ್‌ನಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿರುವ ಮರದಂಡನೆಯ ವಿರುದ್ಧ ತೀಕ್ಷ್ಣ ಪ್ರತಿಕ್ರಿಯಿಸಿರುವ ಆತನ ಕುಟುಂಬ ಈ ಸಂಬಂಧ ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದೆ.
ನಗರದ ಮಖ್ದೂಮ್ ಕಾಲನಿಯ ಮನೆಗೆ ಭೇಟಿ ನೀಡಿದ ಪತ್ರಕರ್ತರೊಂದಿಗೆ ಮಾತನಾಡಿದ ಯಾಸೀನ್‌ನ ತಾಯಿ ಬೀಬಿ ರಿಹಾನಾ, ವಿಚಾರಣೆ ವೇಳೆ ಹಲವಾರು ಬಾರಿ ಮಾನಸಿಕ ಹಿಂಸೆ ನೀಡಿದ ನ್ಯಾಯಾಧೀಶರ ವಿರುದ್ಧ ಹೈದರಾಬಾದ್ ಹೈಕೋರ್ಟ್‌ನಲ್ಲಿ ನಾವು ಪಿಟಿಷನ್‌ದಾವೆ ಹೂಡಿದ್ದು, ಇವರು ವಿಚಾರಣೆಯ ನೆಪದಲ್ಲಿ ನನ್ನ ಮಗನಿಗೆ ಱನಿನಗೆ ಗಲ್ಲು ಶಿಕ್ಷೆ ನೀಡುವೆ’ ಎಂದು ಹೆದರಿಸುತ್ತಿದ್ದರು. ಎನ್‌ಐಎ ನ್ಯಾಯಾಲಯ ಮೊದಲೇ ನಿರ್ಣಯಿಸಿದಂತೆ ನನ್ನ ಮಗನಿಗೆ ಮರಣದಂಡನೆ ವಿಧಿಸಿದೆ ಎಂದರು.
ನ್ಯಾಯಾಲಯದ ತೀರ್ಪಿಗೆ ನಾವು ವ್ಯಥೆ ಪಡುವುದಿಲ್ಲ, ಬದಲಾಗಿ ನಾವು ಹೈಕೋರ್ಟ್ ನಲ್ಲಿ ಎನ್‌ಐಎ ನ್ಯಾಯಾಲಯದ ನಿರ್ಣಯವನ್ನು ಪ್ರಶ್ನಿಸುತ್ತೇವೆ ಎಂದು ಯಾಸೀನ್‌ನ ತಾಯಿ ಹಾಗೂ ಸಹೋದರಿ ಬೀಬಿ ಮಾರಿಯಾ ಮಾಧ್ಯಮಗಳಿಗೆ ತಿಳಿಸಿದರು.
ಸಹೋದರ ಅಬ್ದುಸ್ಸಮದ್ ಸಿದ್ದಿಬಾಪ ಮಾತನಾಡಿ, ನನ್ನ ಸಹೋದರನ ಮೇಲೆ ಹಾಕಲಾದ ಚಾರ್ಜ್‌ಶೀಟ್ ನೀವು ಓದಬೇಕು. ಅದನ್ನು ಕಂಡು ಯಾರೂ ಕೂಡ ಇದು ಮರದಂಡನೆ ನೀಡುವಂತಹ ಪ್ರಕರಣವಲ್ಲ ಎಂದು ಹೇಳಬಲ್ಲರು. ಆದರೆ, ಎನ್‌ಐಎ ನ್ಯಾಯಾಲಯ ಯಾವ ಆಧಾರದ ಮೇಲೆ ಐದು ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ ಎನ್ನುವುದು ತಿಳಿಯದಾಗಿದೆ. ನಮಗೆ ಭಗವಂತನ ಮೇಲೆ ಸಂಪೂರ್ಣ ವಿಶ್ವಾಸವಿದೆ ಮತ್ತು ಹೈಕೋರ್ಟ್‌ನ ಮೇಲು ಬಲವಾದ ವಿಶ್ವಾಸವಿದ್ದು, ಅಲ್ಲಿ ನ್ಯಾಯಾ ನಮ್ಮ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಳೆದ ಮೂರು ವರ್ಷಗಳಿಂದ ನಾವು ಪ್ರತೀ ತಿಂಗಳು ಕುಟುಂಬ ಸಮೇತರಾಗಿ ನನ್ನ ಸಹೋದರನನ್ನು ಭೇಟಿಯಾಗುತ್ತಿದ್ದೆವು. ಆತ ಪ್ರತೀ ಬಾರಿಯೂ ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ವಿನಾಕಾರಣ ಸಿಲುಕಿಸಲಾಗಿದೆ ಮತ್ತು ಈಗಿರುವ ನ್ಯಾಯಾಧೀಶರು ನನಗೆ ಗಲ್ಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪದೆ ಪದೆ ಹೇಳುತ್ತಿದ್ದನು.
ಆತನ ಹೇಳಿಕೆಯಂತೆ ಇಂದು ಮರದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ನಿರ್ಣಯವನ್ನು ನೀಡಿದೆ. ಇದಕ್ಕೆ ನಮಗೆ ಬಹಳ ಬೇಸರವಾಗಿದೆ. ನ್ಯಾಯ ನೀಡುವವರೇ ಅನ್ಯಾಯವೆಸಗುತ್ತಿರುವಾಗ ಯಾರನ್ನೂ ದೂಷಿಸಿ ಲಾಭವಿಲ್ಲ. ನಾವು ಹೈಕೋರ್ಟ್, ಸುಪ್ರೀಮ್‌ಕೋರ್ಟ್ ವರೆಗೆ ಹೋಗುತ್ತೇವೆ. ಅಲ್ಲಾಹನ ಇಚ್ಛೆ ಅಲ್ಲಿ ಏನಾಗುತ್ತೋ ನೋಡೋಣ ಎಂದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







