ಮ್ಯಾನ್ಮಾರ್‌ನಲ್ಲಿ ಮಾನವತೆಯ ವಿರುದ್ಧ ಅಪರಾಧ ; ಮಾನವಹಕ್ಕು ಗುಂಪುಗಳ ಎಚ್ಚರಿಕೆ

ಬ್ಯಾಂಕಾಕ್, ಡಿ. 19: ಮ್ಯಾನ್ಮಾರ್‌ನ ರೊಹಿಂಗ್ಯ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ವಿರುದ್ಧ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಮಾನವತೆಯ ವಿರುದ್ಧದ ಅಪರಾಧವಾಗಬಹುದಾಗಿದೆ ಎಂದು ಮಾನವಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಎಚ್ಚರಿಸಿದೆ.
ರೊಹಿಂಗ್ಯ ಮುಸ್ಲಿಮರನ್ನು ಮ್ಯಾನ್ಮಾರ್ ಸೇನೆ ನಡೆಸಿಕೊಳ್ಳುತ್ತಿರುವ ರೀತಿಗಾಗಿ ಮ್ಯಾನ್ಮಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಮ್ಯಾನ್ಮಾರ್ ಸೇನೆ ಸಾಮೂಹಿಕ ನರಮೇಧ, ಲೂಟಿ ಮತ್ತು ಸಾಮೂಹಿಕ ಅತ್ಯಾಚಾರದಲ್ಲಿ ತೊಡಗಿದೆ ಎಂಬುದಾಗಿ ಆ್ಯಮ್ನೆಸ್ಟಿ ಮುಂತಾದ ಮಾನವಹಕ್ಕು ಗುಂಪುಗಳು ಆರೋಪಿಸಿವೆ.
‘‘ಮ್ಯಾನ್ಮಾರ್ ಸೇನೆಯು ರೊಹಿಂಗ್ಯ ನಾಗರಿಕರನ್ನು ವ್ಯವಸ್ಥಿತ ಹಿಂಸೆಗೆ ಗುರಿಪಡಿಸುತ್ತಿದೆ’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಆಗ್ನೇಯ ಏಶ್ಯ ನಿರ್ದೇಶಕ ರಫೆಂಡಿ ಜಮೀನ್ ಹೇಳಿದರು.
‘‘ಸೇನೆಯ ಕಾರ್ಯಾಚರಣೆಗಳು ನಾಗರಿಕ ಸಮುದಾಯದ ಮೇಲೆ ನಡೆಸುವ ವ್ಯವಸ್ಥಿತ ದಾಳಿಯ ಭಾಗವಾಗಿರುವ ಸಾಧ್ಯತೆಯಿದೆ ಹಾಗೂ ಇದು ಮಾನವತೆಯ ವಿರುದ್ಧದ ಅಪರಾಧವಾಗಬಹುದು’’ ಎಂದಿದ್ದಾರೆ.
ಮ್ಯಾನ್ಮಾರ್ ಸೇನೆಯ ಕಾರ್ಯಾಚರಣೆಗೆ ಸಂಬಂಧಿಸಿ ಆ್ಯಮ್ನೆಸ್ಟಿ ಸೋಮವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದು ತನ್ನ ವರದಿಯಲ್ಲಿ ಹಲವು ಆರೋಪಗಳನ್ನು ಮಾಡಿದೆ.
ರಖೈನ್ ರಾಜ್ಯದ ಪೊಲೀಸ್ ಹೊರಠಾಣೆಗಳ ಮೇಲೆ ಅಕ್ಟೋಬರ್ 9ರಂದು ದಾಳಿ ನಡೆದ ಬಳಿಕ ಸೇನಾ ಕಾರ್ಯಾಚರಣೆ ಆರಂಭವಾಗಿದೆ. ಆ ದಾಳಿಯಲ್ಲಿ ಒಂಬತ್ತು ಪೊಲೀಸರು ಮೃತಪಟ್ಟಿದ್ದಾರೆ.
ಮ್ಯಾನ್ಮಾರ್‌ನ ಪಶ್ಚಿಮ ಭಾಗದಲ್ಲಿರುವ ರಖೈನ್ ರಾಜ್ಯ ದೀರ್ಘ ಕಾಲದಿಂದಲೂ ರೊಹಿಂಗ್ಯ ಮುಸ್ಲಿಮರು ಮತ್ತು ದೇಶದ ಬಹುಸಂಖ್ಯಾತ ಬೌದ್ಧ ಸಮುದಾಯದ ನಡುವಿನ ಘರ್ಷಣೆಗೆ ಸಾಕ್ಷಿಯಾಗುತ್ತಾ ಬಂದಿದೆ.
2012ರಲ್ಲಿ ಅಲ್ಲಿ ಭಾರೀ ಹಿಂಸಾಚಾರ ಸಂಭವಿಸಿದ್ದು ನೂರಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಆ ಬಳಿಕ 1,40,000ಕ್ಕೂ ಅಧಿಕ ಮಂದಿ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ರೊಹಿಂಗ್ಯರನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ಹಿಂಸಾಚಾರ ಪ್ರಮಾಣ ಮತ್ತು ತೀವ್ರತೆ ಸ್ಪಷ್ಟವಾಗಿ ಗೊತ್ತಾಗಿಲ್ಲ, ಯಾಕೆಂದರೆ ನೆರವು ಕಾರ್ಯಕರ್ತರು ಸೇರಿದಂತೆ ಹೊರಗಿನ ವೀಕ್ಷಕರಿಗೆ ಸೇನೆಯು ರಖೈನ್ ರಾಜ್ಯದ ಬಾಗಿಲನ್ನು ಮುಚ್ಚಿದೆ ಎಂದು ಆ್ಯಮ್ನೆಸ್ಟಿ ಹೇಳಿದೆ. ಆದರೆ, ಪ್ರತ್ಯಕ್ಷದರ್ಶಿಗಳು ಕೊಲೆ, ಲೂಟಿ ಮತ್ತು ಅತ್ಯಾಚಾರಗಳ ನಿರ್ದಿಷ್ಟ ಪ್ರಕರಣಗಳ ವಿವರಗಳನ್ನು ನೀಡುತ್ತಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







