ಪ್ರಧಾನಿ ಭೇಟಿಗಾಗಿ ಪನ್ನೀರಸೆಲ್ವಂ ದಿಲ್ಲಿಗೆ

ಚೆನ್ನೈ, ಡಿ.19: ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾರ ನಿಕಟ ಸ್ನೇಹಿತೆ ಶಶಿಕಲಾ ನಟರಾಜನ್ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕೆಂದು ಆಳುವ ಎಡಿಎಂಕೆಯೊಳಗಿನ ಕೆಲವು ಬೇಡಿಕೆ ಮುಂದಿರಿಸಿರುವ ನಡುವೆಯೇ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಇಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗಾಗಿ ಹೊಸದಿಲ್ಲಿಗೆ ಹೋಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಜಯಲಲಿತಾ ನಿಧನರಾದ ಬಳಿಕ ಅವರ ಉತ್ತರಾಧಿಕಾರಿಯಾದ ಪನ್ನೀರ ಸೆಲ್ವಂ ಇದೇ ಮೊದಲ ಬಾರಿ ಪ್ರಧಾನಿಯ ಅಧಿಕೃತ ಭೇಟಿಗಾಗಿ ಆಗಮಿಸಿದ್ದಾರೆ.
ಅವರು, ಜಯಲಲಿತಾಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಹಾಗೂ ಅವರ ಪ್ರತಿಮೆಯನ್ನು ಸಂಸತ್‌ನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆಗಳನ್ನು ಪ್ರಧಾನಿಯ ಮುಂದಿರಿಸುವ ನಿರೀಕ್ಷೆಯಿದೆ.
ರವಿವಾರ ಪನ್ನೀರ ಸೆಲ್ವಂ ಸಂಪುಟದ ಸಚಿವರಾಗಿರುವ ಆರ್.ಬಿ. ಉದಯಕುಮಾರ್, ಕಡಂಬೂರು ರಾಜು ಹಾಗೂ ಸೇವೂರು ಎಸ್. ರಾಮಚಂದ್ರನ್ ಸಹಿತ ಕೆಲವು ಎಡಿಎಂಕೆ ನಾಯಕರು, ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯೊಂದಿಗೆ ಮುಖ್ಯಮಂತ್ರಿ ಪದವಿಯನ್ನು ವಹಿಸಿಕೊಳ್ಳುವಂತೆ ಶಶಿಕಲಾರನ್ನು ಒತ್ತಾಯಿಸಿದ್ದರು.
ಶಶಿಕಲಾ ಸರಕಾರದಲ್ಲಿ ಪಾತ್ರವೊಂದನ್ನು ನಿರ್ವಹಿಸಲು ಅನುಕೂಲವಾಗುವಂತೆ, ಜಯಲಲಿತಾರ ನಿಧನದಿಂದ ತೆರವಾಗಿರುವ ಚೆನ್ನೈಯ ಆರ್.ಕೆ. ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ನಿರ್ಣಯವನ್ನು ಎಡಿಎಂಕೆಯ ವೇದಿಕೆಯಾಗಿರುವ ಜಯಲಲಿತಾ ಪೆರವೈ ಕೈಗೊಂಡಿದೆ. ‘ತಾಯಿ ತಂತಿ ವರಂ’ ಎಂಬ ಶಿರೋನಾಮೆಯ ಈ ನಿರ್ಣಯವನ್ನು ವೇದಿಕೆಯ ಕಾರ್ಯದರ್ಶಿ ಹಾಗೂ ರಾಜ್ಯದ ಕಂದಾಯ ಸಚಿವ ಉದಯಕುಮಾರ್, ಪೋಯಸ್ ಗಾರ್ಡನ್ ನಿವಾಸದಲ್ಲಿ ಶಶಿಕಲಾರಿಗೆ ಹಸ್ತಾಂತರಿಸಿದ್ದಾರೆ.
ಎಡಿಎಂಕೆಯನ್ನು ರಕ್ಷಿಸುವುದರೊಂದಿಗೆ ಚಿನ್ನಮ್ಮ ಆರ್.ಕೆ. ನಗರ ಉಪಚುನಾವಣೆಗೆ ಸ್ಪರ್ಧಿಸಿ, ಮುಖ್ಯಮಂತ್ರಿಯ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಹಾಗೂ ಅಮ್ಮಾ ಸರಕಾರವನ್ನು ಮುನ್ನಡೆಸಬೇಕೆಂದು ಉದಯಕುಮಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಶೋಕತಪ್ತ ಹಾಗೂ ಕಂಪಿಸುತ್ತಿರುವ ಎಡಿಎಂಕೆಯನ್ನು ಒಗ್ಗಟ್ಟಾಗಿರಿಸಲು ಶಶಿಕಲಾ ಒಬ್ಬರೇ ಶಕ್ತರೆಂದು ಹಲವು ನಾಯಕರು ಭಾವಿಸಿದ್ದರೂ, ಈ ಬೆಂಬಲ ಪ್ರದರ್ಶನ ಅವರದೇ ನಾಟಕವೆಂದು ಒಂದು ವರ್ಗವು ಅಭಿಪ್ರಾಯಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







