ಹಿಟ್ ಆ್ಯಂಡ್ ರನ್ ಪ್ರಕರಣ : ಆರೋಪಿ ಪತ್ತೆ
ಬಂಟ್ವಾಳ, ಡಿ.19 : ಲೊರೆಟ್ಟೊಪದವಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ರೇಮಂಡ್ ಫೆರ್ನಾಂಡೀಸ್ (59) ಎಂಬವರಿಗೆ ಢಿಕ್ಕಿ ಹೊಡೆದು ಅವರ ಸಾವಿಗೆ ಕಾರಣನಾಗಿ ಪರಾರಿಯಾದ ಮಾರುತಿ ಓಮ್ನಿ ಕಾರು ಮತ್ತು ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಸೋಮವಾರ ಸಂಜೆ ಈ ಘಟನೆ ನಡೆದಿತ್ತು. ಇವರು ಸಂಜೆ ಸುಮಾರು 6.25 ರ ವೇಳೆಗೆ ರಸ್ತೆ ಬದಿಯಲ್ಲಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ರೇಮಂಡ್ ಅವರಿಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಧಾವಿಸಿ ಬಂದ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರು ಢಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರ ಗಾಯಗೊಂಡ ಫೆರ್ನಾಂಡೀಸ್‌ರನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ಸಾಗಿಸಿದರಾದರೂ , ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು. ಘಟನೆ ಬಳಿಕ ಕಾರು ಚಾಲಕ ತನ್ನ ವಾಹನ ನಿಲ್ಲಿಸದೆ ಪರಾರಿಯಾಗಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ, ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿ ಆರೋಪಿ ಕಾರು ಚಾಲಕ ನವೀನ್ ಪೂಜಾರಿ ಎಂಬಾತನನ್ನು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾದರು. ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪ್ರಕರಣದಲ್ಲಿ ಕಲಂ 279, 304(ಎ) ಐಪಿಸಿ ಜೊತೆಗೆ 134(ಎ) ಮತ್ತು (ಬಿ) ಮೋಟಾರು ವಾಹನ ಕಾಯ್ದೆಯನ್ನು ಕಲಂ 304 ಐಪಿಸಿಯನ್ನಾಗಿ ಪರಿವರ್ತಿಸಿ ತನಿಖೆ ಮುಂದುವರಿಸಲು ನ್ಯಾಯಾಲಯಕ್ಕೆ ವರದಿ ನಿವೇದಿಸಲಾಗಿ, ಅನುಮತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







