ಕೊಡಗಿನ ದಿಡ್ಡಳ್ಳಿ ಆದಿವಾಸಿಗಳಿಗೆ ಪುನರ್ವಸತಿಗೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ

ಮಂಗಳೂರು,ಡಿ.19: ಕೊಡಗಿನ ದಿಡ್ಡಳ್ಳಿ ಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅರಣ್ಯದಿಂದ ಹೊರದಬ್ಬಿರುವ ಕ್ರಮವನ್ನು ವಿರೋಧಿಸಿ ಅವರಿಗೆ ಪುನರ್ವಸತಿಗೆ ಆಗ್ರಹಿಸಿ ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಡಿವ್ಠೈಎಫ್‌ಐ ವತಿಯಿಂದ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ಕಟ್ಟಿ ವಾಸವಾಗಿರುವವರನ್ನು ಒಕ್ಕಲೆಬ್ಬಿಸಿದೆ. ಇತರ ಯಾವುದೇ ಮನೆ ನಿವೇಶನ ಹೊಂದದೆ ಇರುವ ಕಾಡನ್ನೇ ನಂಬಿ ಬದುಕುತ್ತಿರುವ ಆದಿವಾಸಿಗಳನ್ನು ಏಕಾಏಕಿ ಅರಣ್ಯದಿಂದ ಹೊರದಬ್ಬಿ ಬೀದಿ ಪಾಲು ಮಾಡಿರುವ ಸರಕಾರದ ಕ್ರಮ ಅಮಾನವೀಯ ಸಮಾಜವಾದಿ ಧೋರಣೆಗೆ ವ್ಯತಿರಿಕ್ತವಾಗಿದೆ. ಇದೊಂದು ಸರ್ವಾಧಿಕಾರಿ ಪ್ರವೃತ್ತಿಯಾಗಿದೆ , ಪ್ರಜಾತಂತ್ರ ವಿರೋಧಿ ಧೋರಣೆಯಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಡಿ.22.ಕೊಡಗು ಚಲೋಗೆ ಬೆಂಬಲ:
ದಿಡ್ಡಳ್ಳಿ ಹಾಡಿಯ ಗಿರಿಜನರ ಗುಡಿಸಲನ್ನು ಧ್ವಂಸ ಮಾಡಿ ಅವರನ್ನು ಬೀದಿ ಪಾಲು ಮಾಡಿರುವ ಕೃತ್ಯದ ವಿರುದ್ಧ ಹಾಗೂ ಅವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಡಿ.22ರಂದು ಹಮ್ಮಿಕೊಂಡಿರುವ ಕೊಡಗು ಚಲೋಗೆ ಬೆಂಬಲ ನೀಡುವುದಾಗಿ ಡಿವೈಎಫ್ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅರಣ್ಯದೊಳಗಿನ ಆದಿವಾಸಿಗಳ ರಕ್ಷಣೆಗೆ ಕಾಯಿದೆ ರೂಪಿಸಿ ಇದೀಗ ಅದಕ್ಕೆ ವಿರುದ್ಧವಾಗಿ ಅರಣ್ಯದೊಳಗಿನ ಆದಿವಾಸಿಗಳನ್ನು ಹೊರದಬ್ಬಿ ಅತಂತ್ರ ಸ್ಥಿತಿಗೆ ತಲುಪಿಸಿರುವುದು ವಿಪರ್ಯಾಸ. ದೇಶದಲ್ಲಿ ಬಿಜೆಪಿ ನೇತೃತ್ವದ ಜಾರ್ಖಂಡ್,ಛತ್ತೀಸ್‌ಗಢಗಳಲ್ಲಿನ ರಾಜ್ಯ ಸರಕಾರಗಳು ಅಮಾನವೀಯವಾಗಿ ಆದಿವಾಸಿಗಳನ್ನು ಅರಣ್ಯದಿಂದ ಹೊರದಬ್ಬುವ ಕ್ರಮ ಕೈಗೊಂಡಿದೆ ಎಂದು ಸಮುದಾಯ ಸಂಘಟನೆಯ ಸಂಚಾಲಕ ವಾಸುದೇವ ಉಚ್ಚಿಲ್ ಆರೋಪಿಸಿದ್ದಾರೆ.
ಯಾವುದೇ ಪರಿಹಾರ ಕ್ರಮ ಕೈಗೊಳ್ಳದೆ ಬಡವರನ್ನು ಒಕ್ಕಲೆಬ್ಬಿಸಿರುವ ವಿರುದ್ಧ ರಾಜ್ಯಾದ್ಯಂತ ನಡೆಯುವ ಹೋರಾಟಕ್ಕೆ ಡಿವೈಎಫ್‌ಐ ಬೆಂಬಲ ನೀಡಲಿದೆ ಎಂದು ಜಿಲ್ಲಾ ಡಿ ವೈಎಫ್‌ಐ ಅಧ್ಯಕ್ಷ ದಯಾನಂದ ಶೆಟ್ಟಿ ತಿಳಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಡಿವೈಎಫ್‌ಐ ಉಪಾಧ್ಯಕ್ಷ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಜೀವನ್ ರಾಜ್ ಕುತ್ತಾರ್, ರಫೀಕ್ ಹರೇಕಳ ಎಸ್‌ಎಫ್‌ಐ ಅಧ್ಯಕ್ಷ ನಿತಿನ್ ಕುಮಾರ್, ಅಶೋಕ್, ಮಾಧವಿ, ಮಯೂರಿ ಮೊದಲಾದವರು ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







