ಸರ್ವಧರ್ಮೀಯ ಭಾವೈಕ್ಯದ ಕ್ರಿಸ್‌ಮಸ್ ಸಂದೇಶ

ಮೂಡಿಗೆರೆ, ಡಿ.19: ಬಾಳೂರು ಸಮೀಪದ ಕೆಳಗೂರು ಗ್ರಾಮದ ಕ್ರೈಸ್ತ ಬಾಂಧವರು ಯೇಸು ಕ್ರಿಸ್ತನ ಆಗಮನದ ಸುವಾರ್ತೆಯನ್ನು ಭಾವೈಕ್ಯದ ಸಂಕೇತವಾಗಿ ಪ್ರತಿ ಕುಟುಂಬದವರ ಜೊತೆ ಸೇರಿ ಕ್ರಿಸ್‌ಮಸ್ ಕೇರಲ್ಸ್ ಹಾಡಿ ಸಂಭ್ರಮಿಸಿದರು.
ಕೆಳಗೂರು ಗ್ರಾಮವು ಎಲ್ಲಾ ಧರ್ಮೀಯರ ತಾಣವಾಗಿದ್ದು, ಇಲ್ಲಿ ಏಕತೆಯೊಂದಿಗೆ ಭಾವೈಕ್ಯದ ಒಗ್ಗೂಡುವಿಕೆಯೂ ಇದೆ. ಕ್ರಿಸ್‌ಮಸ್ ಸಂದೇಶ ಬರೀ ಕ್ರೈಸ್ತರಿಗೆ ಮಾತ್ರವಲ್ಲದೇ ಇತರ ಧರ್ಮೀಯರು ಗೌರವಿಸುತ್ತಾರೆ. ಸಾಂತಾ ಕ್ಲಾಸ್ ಜಾತಿ ಮತ ಭೇದ ಮಾಡದೆ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಸಂದೇಶ ಸಾರಿ, ಪ್ರತಿ ಮನೆಯವರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.ಅನ್ಯಥಾ ಭಾವಿಸದೇ ಪ್ರತಿಯೊಬ್ಬರೂ ಕೂಡ ಕ್ರಿಸ್‌ಮಸ್ ಸಂದೇಶವನ್ನು ಗೌರವಿಸುತ್ತಾರೆ.
ಮನೆಯ ಎಲ್ಲ ಸದಸ್ಯರಿಗೂ ಸಾಂತಾ ಕ್ಲಾಸ್ ಕೈಕುಲುಕಿ ಸಿಹಿಯನ್ನು ಹಂಚುತ್ತಾರೆ. ಭಕ್ತಿಗೀತೆಗಳ ಸುಧೆಗೆ ಸಾಂತಾ ಕ್ಲಾಸ್ ಮತ್ತು ಜೊತೆಗೆ ಬಂದವರು ಹರುಷದ ಹೆಜ್ಜೆ ಹಾಕುತ್ತಾರೆ. ಭಾವೈಕ್ಯದ ನಡುವೆ ಕ್ರಿಸ್‌ಮಸ್ ಸಂದೇಶ ಹಾಗೂ ಸಂಭ್ರಮದ ಹಬ್ಬ ಸರ್ವ ಜನಾಂಗಕ್ಕೂ ಸುಖ ಶಾಂತಿ ನೆಮ್ಮದಿ ನೀಡಲೆಂದು ಪ್ರಾರ್ಥಿಸಿ ಬೈಬಲ್ ಸಂದೇಶವನ್ನು ಓದಿ ಯೇಸುವಿನ ಜನನದ ಶುಭ ವಾರ್ತೆಗಾಗಿ ಎದುರು ನೊಡುವುದೇ ಇಲ್ಲಿಯ ಸರ್ವ ಜನರ ಭಾವೆಕ್ಯತೆಯ ಹಬ್ಬಕ್ಕೆ ಒಂದು ನಿದರ್ಶನವಾಗಿದೆ.
ಈ ಕ್ರಿಸ್‌ಮಸ್ ಕೇರಲ್ಸ್ ತಂಡದಲ್ಲಿ ಜಾನ್ ನೊರೊನ್ನಾ, ವಲೇರಿಯನ್ ಪಿರೇರಾ, ಲೂಯಿಸ್, ಹಿಲ್ಡಾ, ಸ್ಟೆಲ್ಲಾ ಪಿರೇರಾ, ಎಪ್ರೆಜ್ ಸೆರಾವೊ, ಅಮಿತ್ ಮತ್ತಿತತರು ಉಪಸ್ಥಿತರಿದ್ದರು.







