ಪಾನಮತ್ತನಿಂದ ಬಸ್ ಚಾಲಕನ ಮೇಲೆ ಹಲ್ಲೆ: ಬಂಧನ
ಮುಂಡಗೋಡ, ಡಿ.19: ಪಾನಮತ್ತನೋರ್ವನಿಂದ ಬಸ್ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಶನಿವಾರ ಸಂಜೆ ನಡೆದಿದೆ.
ಹಲ್ಲೆಗೊಳಗಾದ ಬಸ್ ಚಾಲಕನನ್ನು ಹೊಳೆಬಸಪ್ಪಬಸಪ್ಪಶೀಲವಂತರ್ (36), ಹಲ್ಲೆ ಮಾಡಿದ ವ್ಯಕ್ತಿಯನ್ನು ಶಬ್ಬೀರ್ ಮಸ್ತಾನಿ ಎಂದು ಗುರುತಿಸಲಾಗಿದೆ.
ಚಾಲಕ ಹೊಳೆಬಸಪ್ಪಶೀಲವಂತರ್ ಶನಿವಾರ ಸಂಜೆ ಸುಮಾರು 6:45ಕ್ಕೆ ಬಸ್ಸನ್ನು ಮುಂಡಗೋಡದಿಂದ ಯಲ್ಲಾಪುರಕ್ಕೆ ಚಲಾಯಿಸುತ್ತಿದ್ದಾಗ, ಗುಂಜಾವತಿ ಗ್ರಾಮದ ಬಳಿ ಶಬ್ಬೀರ್ ಮಸ್ತಾನಿ ಅಮಲಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದ.
ಚಾಲಕನು ಹಾರ್ನ್ ಮಾಡಿ ಸರಿಯುವಂತೆ ಸೂಚಿಸಿದ್ದಾನೆ. ತಾನು ಸರಿದ ನಂತರವೇ ಬಸ್ ಹೋಗಬೇಕು ಎಂದು ಶಬ್ಬೀರ್ ಮಸ್ತಾನಿ ಹೇಳಿದ್ದಾನೆ.
ಬಸ್ ಚಾಲಕ ಸೈಡಿನಿಂದ ಬಸ್ ತೆಗೆದುಕೊಂಡು ಹೋಗುತ್ತಿದ್ದಾಗ, ಶಬ್ಬೀರ್ ಬಸ್ ಅಡ್ಡಗಟ್ಟಿ ಚಾಲಕನ ಶರ್ಟ್ ಹಿಡಿದು ಎಳೆದಾಡಿ ಮುಖಕ್ಕೆ ಬಾರಿಸಿದ್ದಾನೆ ಎಂದು ಹೇಳಲಾಗಿದೆ. ಮಧ್ಯ ಪ್ರವೇಶಿಸಿದ ಬಸ್ ನಿರ್ವಾಹಕ ಅಖಂಡಪ್ಪಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ದೂಡಿದ್ದಾನೆ.
ಈ ಕುರಿತು ಬಸ್ ಚಾಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





