ಭವಿಷ್ಯ ನಿಧಿ: ಬಡ್ಡಿದರ ಕಡಿತ

ಹೊಸದಿಲ್ಲಿ,ಡಿ.19: ನೌಕರರ ಭವಿಷ್ಯನಿಧಿ ಸಂಸ್ಥೆಯು 2016-17ನೇ ಹಣಕಾಸು ವರ್ಷಕ್ಕೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.8ರಿಂದ ಶೇ.8.65ಕ್ಕೆ ತಗ್ಗಿಸಿದೆ.
ಕೇಂದ್ರ ಕಾರ್ಮಿಕ ಸಚಿವರ ನೇತೃತ್ವದ ಕೇಂದ್ರೀಯ ವಿಶ್ವಸ್ತ ಮಂಡಳಿಯು ಸೋಮವಾರ ಇಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಂಡಿದೆ.
ಆರ್‌ಬಿಐ ಸಾಲದರಗಳನ್ನು ತಗ್ಗಿಸಿದ ಬಳಿಕ ಬ್ಯಾಂಕುಗಳು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಮಂಡಳಿಯು ನೌಕರರ ಠೇವಣಿಗಳ ಮೇಲಿನ ಬಡ್ಡಿದರವನ್ನು ತಗ್ಗಿಸುವ ನಿರ್ಧಾರಕ್ಕೆ ಬಂದಿದೆ. ಮಂಡಳಿಯ ಈ ನಿರ್ಧಾರ ವು ಕೇಂದ್ರವು ಅಧಿಸೂಚನೆಯನ್ನು ಹೊರಡಿಸಿದ ಬಳಿಕ ಜಾರಿಗೆ ಬರಲಿದೆ.
ವಿಶ್ವಸ್ತ ಮಂಡಳಿಯಲ್ಲಿರುವ ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳು ಕಳೆದ ವರ್ಷದ ಬಡ್ಡಿದರವನ್ನೇ ಮುಂದುವರಿಸಬೇಕೆಂದು ಬಯಸಿದ್ದರಾದರೂ ಮಂಡಳಿಯು ತನ್ನ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಬಡ್ಡಿದರವನ್ನು ಕಡಿತಗೊಳಿಸಿದೆ.
ಈ ವರ್ಷದ ಆರಂಭದಲ್ಲಿ 2015-16ನೇ ಸಾಲಿಗೆ ಭವಿಷ್ಯನಿಧಿ ಬಡ್ಡಿದರವನ್ನು ಶೇ.8.8ರಿಂದ ಶೇ.8.7ಕ್ಕೆ ತಗ್ಗಿಸಲು ವಿತ್ತ ಸಚಿವಾಲಯವು ನಿರ್ಧರಿಸಿತ್ತು. ಆದರೆ ಕಾರ್ಮಿಕ ಒಕ್ಕೂಟಗಳ ಪ್ರತಿಭಟನೆಯಿಂದಾಗಿ ಬಳಿಕ ಆ ನಿರ್ಧಾರವನ್ನು ಹಿಂದೆಗೆದುಕೊಂಡಿತ್ತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







