ರೆಸಾರ್ಟ್‌ಗಳ ಅತಿಕ್ರಮಣ ತೆರವಿಗೆ ಆಪ್ ಒತ್ತಾಯ
ಮಡಿಕೇರಿ, ಡಿ.19 : ದಿಡ್ಡಳ್ಳಿಯಲ್ಲಿ ಅಸಹಾಯಕರ ಮೇಲೆ ದಬ್ಬಾಳಿಕೆ ನಡೆಸಿರುವ ಅಧಿಕಾರಿ ವರ್ಗ ತಾಕತ್ತಿದ್ದರೆ ಬೃಹತ್ ರೆಸಾರ್ಟ್‌ಗಳು ಅತಿಕ್ರಮಿಸಿಕೊಂಡಿರುವ ಸರಕಾರಿ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಿ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಘಟಕ ಸವಾಲು ಹಾಕಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಮುಖ ಮಾದೇಟಿರ ತಿಮ್ಮಯ್ಯ, ಜಿಲ್ಲಾಡಳಿತದ ವಿರುದ್ಧ ಪಕ್ಷದ ಧಿಕ್ಕಾರವಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಮುನ್ಸೂಚನೆಯನ್ನೂ ನೀಡದೆ ರಾತೋರಾತ್ರಿ ಗುಡಿಸಲುಗಳನ್ನು ನಾಶ ಮಾಡಿ ದುರ್ಬಲರನ್ನು ಬೀದಿಪಾಲು ಮಾಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು ಹಾಗೂ ಸಂಸದರುಗಳು ಇದಕ್ಕೆ ನೇರ ಕಾರಣಕರ್ತರಾಗಿದ್ದಾರೆ.
ಆದಿವಾಸಿಗಳಂತೆ ಇವರುಗಳ ಕುಟುಂಬದ ಸದಸ್ಯರು ಕೂಡ ಮಳೆ ಬಿಸಿಲಿನಲ್ಲಿ ಜೀವನ ಸಾಗಿಸಲು ಸಾಧ್ಯವೆ ಎಂದು ತಿಮ್ಮಯ್ಯ ಪ್ರಶ್ನಿಸಿದರು. ಉಪ ಸಂಚಾಲಕ ಎಂ.ಆರ್. ಮಂಜುನಾಥ್ ಮಾತನಾಡಿ, ಆದಿವಾಸಿಗಳು ಆಹಾರ ನೀರಿಲ್ಲದೆ, ಅಹೋರಾತ್ರಿ ಧರಣಿ ನಡೆಸುವ ಮೂಲಕ ನರಕ ಯಾತನೆ ಅನುಭವಿಸುತ್ತಿದ್ದರೆ, ಸಂಸದ ಪ್ರತಾಪ ಸಿಂಹ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆಯೂ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಮುಕ್ಕಾಟಿರ ಅಪ್ಪಯ್ಯ, ಕಾರ್ಯದರ್ಶಿ ಎಚ್.ಜಿ. ಬಾಲಸುಬ್ರಹ್ಮಣ್ಯ, ಎಚ್.ಬಿ. ಪೃಥ್ವಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಕೋಮು ಗಲಭೆ ಸೃಷ್ಟಿಸುವ ಬಿಜೆಪಿ ನಾಯಕರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸಂಸದ ಪ್ರತಾಪ ಸಿಂಹ, ಬೀದಿಪಾಲಾದ ಆದಿವಾಸಿಗಳಿಗೆ ಯಾವುದೇ ನೆರವನ್ನು ನೀಡದಿರುವುದು ಇವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
- ಮಾದೇಟಿರ ತಿಮ್ಮಯ







