ನಝೀರ್‌ಸಾಬ್‌ರ ಆಶಯ ದೇಶಕ್ಕೆ ಮಾದರಿ: ಹಕ್ರೆ
ಅಬ್ದುಲ್ ನಝೀರ್‌ಸಾಬ್ ಜನ್ಮದಿನಾಚರಣೆ,

ಸಾಗರ, ಡಿ.19: ಪಂಚಾಯತ್‌ರಾಜ್ ವ್ಯವಸ್ಥೆ ಸದೃಢಗೊಳಿಸಲು ನೀರುಸಾಬ್ ಎಂದೇ ಹೆಸರು ಪಡೆದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್‌ಸಾಬ್ ಹಾಕಿಕೊಟ್ಟ ಮಾರ್ಗದರ್ಶನ ಇಂದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಾರದೆ ಇರುವುದು ಬೇಸರದ ಸಂಗತಿ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು. ಇಲ್ಲಿನ ತಾಲೂಕು ಪಂಚಾಯತ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅಬ್ದುಲ್ ನಜೀರ್‌ಸಾಬ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಪ್ರತಿಹಳ್ಳಿಗೂ ಕುಡಿಯುವ ನೀರು ಪೂರೈಸುವ ಮೂಲಕ ಅಬ್ದುಲ್ ನಜೀರ್‌ಸಾಬ್ ಮನೆಮಾತಾದವರು. ಅಧಿಕಾರ ವಿಕೇಂದ್ರೀಕರಣದ ಮೂಲಕ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಸದೃಢಗೊಳಿಸಲು ಸಾಧ್ಯವಿದೆ ಎನ್ನುವ ನಜೀರ್‌ಸಾಬ್ ಅವರ ಆಶಯ ದೇಶಕ್ಕೆ ಮಾದರಿಯಾದದ್ದು. ಬದಲಾದ ದಿನಮಾನಗಳಲ್ಲಿ ತಾಲೂಕು ಪಂಚಾಯತ್‌ನಂತಹ ಕೇಂದ್ರ ಪ್ರದೇಶದ ಆಡಳಿತವನ್ನು ಮೊಟಕುಗೊಳಿಸುವ ಕೆಲಸ ಮಾಡಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ರಮೇಶ್‌ಕುಮಾರ್ ಅವರು ಪಂಚಾಯತ್ ಆಡಳಿತ ಸುಧಾರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಆದರೆ ವರದಿಯ ಬಹುತೇಕ ಅಂಶಗಳು ಈತನಕ ಅನುಷ್ಠಾನಕ್ಕೆ ಬಂದಿಲ್ಲ. ಹಿಂದೆ 14ನೆ ಹಣಕಾಸು ಯೋಜನೆಯಡಿ ತಾಲೂಕು ಪಂಚಾಯತ್‌ಗಳಿಗೆ 2.50 ಕೋಟಿ ರೂ. ಅನುದಾನ ಬರುತ್ತಿತ್ತು. ಈಗ ಅದನ್ನು 1 ಕೋಟಿ ರೂ.ಗೆ ಮೊಟಕು ಗೊಳಿಸಲಾಗಿದೆ. ಇದರಿಂದ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರಕಾರ ಕನಿಷ್ಠ ತಾಲೂಕು ಪಂಚಾಯತ್‌ಗೆ ಪ್ರತಿವರ್ಷ 5 ಕೋಟಿ ರೂ. ಅನುದಾನ ನೀಡುವಂತೆ ಆಗಬೇಕು ಎಂದು ಒತ್ತಾಯಿಸಿದರು.
ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ಹರಾಜು ಹಾಗೂ ರಾಜಧನ ಸಂಗ್ರಹ ಮಾಡುವ ಅಧಿಕಾರವನ್ನು ತಾಲೂಕು ಪಂಚಾಯತ್‌ಗೆ ಹಸ್ತಾಂತರಿಸುವಂತಾಗಬೇಕು. ಇದರಿಂದ ಅರ್ಹರಿಗೆ ಮರಳು ಸಿಗುವ ಜೊತೆಗೆ ಬಂದ ರಾಜಧನದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ತಾಲೂಕು ಪಂಚಾಯತ್‌ನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದಾಗ ನಜೀರ್‌ಸಾಬ್ ಅವರು ಕಂಡ ಗ್ರಾಮೀಣಾಭಿವೃದ್ಧಿ ಕನಸು ನನಸು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ಕಲಸೆ ಚಂದ್ರಪ್ಪಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಎಂ.ಎಚ್. ಪರಶುರಾಮ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ್ ಬರದವಳ್ಳಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಹಾಜರಿದ್ದರು.







