ಮಣಿಪುರ: ಚರ್ಚ್‌ನ ಮೇಲೆ ದಾಳಿ
ಕ್ರಿಸ್‌ಮಸ್‌ಗೆ ಹಿಂಸೆಯ ಕರಿನೆರಳು
ಗುವಾಹತಿ, ಡಿ.19: ಮಣಿಪುರದ ರಾಜಧಾನಿ ಇಂಫಾಲದ ಅತ್ಯಂತ ಹಳೆಯ ಮಣಿಪುರ ಬಾಪ್ಟಿಸ್ಟ್ ಕನ್ವೆನ್ಶನ್ ಚರ್ಚ್‌ನಲ್ಲಿ ರವಿವಾರದ ಸಾಮೂಹಿಕ ಪ್ರಾರ್ಥನೆಗೆ ಜನರ ಹಾಜರಾತಿ ವಿರಳವಾಗಿತ್ತು. ಶನಿವಾರ ಅಜ್ಞಾತ ದುಷ್ಕರ್ಮಿಗಳ ಗುಂಪೊಂದು ಈ ಚರ್ಚ್‌ನ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸಾಚಾರದ ವದಂತಿ ಹರಡಿದುದರಿಂದ ಯಾವಾಗಲೂ ಪ್ರಾರ್ಥನೆಗೆ ಬರುತ್ತಿದ್ದ ಅರ್ಧದಷ್ಟು ಮಂದಿ ಮಾತ್ರ ನಿನ್ನೆ ಆಗಮಿಸಿದ್ದರು.
ಚರ್ಚ್‌ನ ಮೇಲಣ ದಾಳಿಯು ಕ್ರೈಸ್ತರ ಮುಖ್ಯವಾಗಿ ಬಾಪ್ಟಿಸ್ಟರ ಭಾವನೆಗಳನ್ನು ಘಾಸಿಗೊಳಿಸಿದೆಯೆಂದು ಚರ್ಚ್‌ನ ಪಾಸ್ಟರ್ ರೆ.ಎಲ್.ಸೈಮನ್ ರಾವ್ಮಾಯಿ ಹೇಳಿದ್ದಾರೆ.
ನಾಗಾ ಸಮುದಾಯದ ಸದಸ್ಯರು ನವೆಂಬರ್‌ನಿಂದ ಆರ್ಥಿಕ ತಡೆಯನ್ನು ಹೇರಿದ್ದಾರೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಅದು ಇಂಫಾಲದ ಪ್ರಬಲ ಮೈತ್ರಿ ಸಮುದಾಯವನ್ನು ರೊಚ್ಚಿಗೆಬ್ಬಿಸಿದೆ. ಚರ್ಚ್‌ನ ಮೇಲೆ ನಡೆದ ದಾಳಿಯನ್ನು ನಾಗಾ ಸಮುದಾಯದವರ ಮೇಲೆ ನಡೆದ ದಾಳಿಯೆಂದು ಭಾವಿಸಲಾಗಿದೆ.
ರಾಜ್ಯದಲ್ಲಿ 7 ಹೊಸ ಜಿಲ್ಲೆಗಳನ್ನು ಸೃಷ್ಟಿಸುವ ಸರಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ನಾಗಾ ಗುಂಪುಗಳು ಆರ್ಥಿಕ ತಡೆಯನ್ನು ಹೇರಿವೆ. ಹೊಸ ಜಿಲ್ಲೆಗಳ ರಚನೆ ತಮ್ಮ ಪೂರ್ವಿಕರ ನೆಲದ ಅತಿಕ್ರಮಣವೆಂಬುದು ಅವುಗಳ ಆರೋಪವಾಗಿದೆ.
ರವಿವಾರ ಇಂಫಾಲದಲ್ಲಿ ಪ್ರತಿಭಟನಾಕಾರರು ಕ್ರಿಸ್‌ಮಸ್‌ಗಾಗಿ ನಾಗಾ ಪ್ರಾಬಲ್ಯದ ಪರ್ವತ ಜಿಲ್ಲೆಗಳಿಗೆ ಹಲವು ವಾಹನಗಳಲ್ಲಿ ಹೋಗಲು ಪ್ರಯತ್ನಿಸಿದ ಸಾವಿರಾರು ಮಂದಿಯನ್ನು ಕೆಳಗಿಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಆದರೆ, ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.





