ದಾಮೋದರ ಪ್ರಭು

ಮೂಡುಬಿದಿರೆ, ಡಿ.19: ಇಲ್ಲಿನ ಹಿರಿಯ ಮುದ್ರಣ ಉದ್ಯಮಿ ಎಂ. ದಾಮೋದರ ಪ್ರಭು (78) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಡುಬಿದಿರೆಯಲ್ಲಿ ಎರಡನೆ ಮುದ್ರಣ ಸಂಸ್ಥೆಯಾಗಿ 1950ರಲ್ಲಿ ವಿವೇಕಾನಂದ ಪ್ರೆಸ್ ಆರಂಭಿಸಿ ಗ್ರಾಮಾಂತರ ಪತ್ರಿಕೆಗಳು, ಸಾಹಿತ್ಯ ಕೃತಿಗಳ ಸಹಿತ ಮುದ್ರಣ ರಂಗದಲ್ಲಿ ತೊಡಗಿಕೊಂಡ ದಾಮೋದರ ಪ್ರಭು ಜನಾನುರಾಗಿಯಾಗಿದ್ದರು. ಮೂರು ದಶಕಗಳ ಕಾಲ ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಳಗಳ ಮೊಕ್ತೇಸರರಾಗಿ, ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಉಮಾನಾಥ ಕೋಟ್ಯಾನ್, ಮಂಡಳ ಅಧ್ಯಕ್ಷ ಈಶ್ವರ ಕಟೀಲ್, ಮೂಡುಬಿದಿರೆ ವಿಹಿಂಪ ಅಧ್ಯಕ್ಷ ಕೆ. ವಿಶ್ವನಾಥ ಪ್ರಭು, ಮೂಡಾ ಸದಸ್ಯ ಎಚ್. ಸುರೇಶ್ ಪ್ರಭು, ಪುರಸಭಾ ಸದಸ್ಯರು, ಮೂಡುಬಿದಿರೆ ಮುದ್ರಕರ ಸಂಘದ ಅಧ್ಯಕ್ಷ ಜಯರಾಮ ಕೋಟ್ಯಾನ್, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಳಗಳ ಮಾಜಿ, ಹಾಲಿ ಮೊಕ್ತೇಸರರು ಮೃತರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.





