ನಾರಾಯಣಗುರುಗಳ ಮೇಲೆ ಆರೆಸ್ಸೆಸ್ ದಾಳಿ

ಕೇರಳದಲ್ಲಿ ಜಾತೀಯತೆಯ ಉತ್ತುಂಗತೆಯನ್ನು ಕಂಡು ಅದನ್ನು ‘ಹುಚ್ಚಾಸ್ಪತ್ರೆ’ಯೆಂದು ಸ್ವಾಮಿ ವಿವೇಕಾನಂದರು ಬಣ್ಣಿಸಿದ್ದರು. ಕೇರಳದ ಮೇಲ್ವರ್ಣೀಯರ ಶೋಷಣೆಯ ಗಾಯಗಳ ಕಲೆಗಳು ಇನ್ನೂ ಅಲ್ಲಿನ ತಳಸ್ತರದ ಜನರಲ್ಲಿ ಉಳಿದುಕೊಂಡಿವೆೆ. ಆದ್ದರಿಂದಲೇ, ಮನುವಾದಿಗಳು ಬೇರೆ ಬೇರೆ ವೇಷಗಳಿಂದ ಕೇರಳವನ್ನು ಮರು ಪ್ರವೇಶಿಸಲು ಭಾರೀ ಪ್ರಯತ್ನಗಳನ್ನು ಮಾಡುತ್ತಿದ್ದರೂ ಅದರಲ್ಲಿ ವಿಫಲರಾಗುತ್ತಿದ್ದಾರೆ. ಕೇರಳದಲ್ಲಿ ನಂಬೂದಿರಿ ಬ್ರಾಹ್ಮಣರೂ ಸೇರಿದಂತೆ ಅಲ್ಲಿನ ಮೇಲ್ವರ್ಣೀಯರ ಶೋಷಣೆ ಉತ್ತುಂಗದಲ್ಲಿದ್ದ ಸಮಯದಲ್ಲಿ ಅದಕ್ಕೆ ಪ್ರಬಲ ಪ್ರತಿರೋಧ ಕಂಡು ಬಂದುದು ನಾರಾಯಣಗುರುಗಳ ಮೂಲಕ. ಬ್ರಾಹ್ಮಣರ ವೈದಿಕ ಸಿದ್ಧಾಂತಕ್ಕೆ ಪ್ರತಿಯಾಗಿ ತಳಸ್ತರವನ್ನು ತೆಕ್ಕೆಯಲ್ಲಿ ತೆಗೆದುಕೊಳ್ಳುವ ಮಾನವೀಯ ಧರ್ಮವೊಂದರ ಪ್ರತಿ ಸಿದ್ಧಾಂತವನ್ನು ಕಂಡುಕೊಂಡ ಮಹಾನ್ ಗುರು ಅವರು. ಕೇರಳದಲ್ಲಿ ಈಳವರು ಯಾನೆ ಈಡಿಗರು ಯಾನೆ ಬಿಲ್ಲವ ಶೋಷಿತರ ಸಂಖ್ಯೆ ಯೇ ದೊಡ್ಡದಾಗಿದ್ದರಿಂದ ಅವರನ್ನೇ ಗುರಿಯಾಗಿಸಿಕೊಂಡು ತಮ್ಮ ಚಳವಳಿಯನ್ನು ನಾರಾಯಣ ಗುರು ನಡೆಸಿದರು. ಆದರೆ ಅವರು ಯಾವತ್ತೂ ಒಂದು ಜಾತಿಗೆ ಸೀಮಿತರಾಗಿರಲು ಬಯಸಿರಲಿಲ್ಲ. ಯಾಕೆಂದರೆ ಅವರು ಜಾತಿಯನ್ನೇ ನಂಬಿರಲಿಲ್ಲ. ಒಂದೇ ಜಾತಿ, ಒಂದೇ ಕುಲ ಎನ್ನುವುದರ ತಳಹದಿಯ ಮೇಲೆ ತಮ್ಮ ಅಧ್ಯಾತ್ಮ ಪರಂಪರೆಯನ್ನು ಹುಟ್ಟು ಹಾಕಿದರು. ದೇವಸ್ಥಾನಕ್ಕೆ ಪ್ರವೇಶ ಪಡೆಯುವುದಿರಲಿ, ಅದರ ಪಕ್ಕದಲ್ಲಿರುವ ಬೀದಿಯಲ್ಲಿ ನಡೆಯುವುದಕ್ಕೂ ಕೆಳಜಾತಿಯವರಿಗೆ ಅವಕಾಶಗಳಿಲ್ಲದ ಸಂದರ್ಭದಲ್ಲಿ ಕೆಳಜಾತಿಯವರಿಗಾಗಿಯೇ ದೇವಸ್ಥಾನಗಳನ್ನು, ಶಾಲೆಗಳನ್ನು ಕಟ್ಟಿದವರು ನಾರಾಯಣ ಗುರುಗಳು. ಅಷ್ಟೇ ಅಲ್ಲ, ಜನಿವಾರ ಧರಿಸುವ ಬ್ರಾಹ್ಮಣರಿಗೆ ಪ್ರತಿಯಾಗಿ ಜನಿವಾರವಿಲ್ಲದ ಕೆಳಜಾತಿಯ ಅರ್ಚಕರನ್ನು ಸೃಷ್ಟಿಸಿದರು ಮತ್ತು ಅವರಿಗೆ ಶಾಂತಿ ಎಂದು ಹೆಸರಿಟ್ಟರು. ಅವರ ಚಳವಳಿ ಇಡೀ ಕೇರಳದ ಸಾಮಾಜಿಕ ಜೀವನವನ್ನೇ ಬದಲಿಸಿತು. ಇದು ಕೇವಲ ಕೇರಳಕ್ಕಷ್ಟೇ ಅಲ್ಲದೆ ದಕ್ಷಿಣ ಭಾರತಾದ್ಯಂತ ತನ್ನ ಪ್ರಭಾವವನ್ನು ಬೀರಿತು. ನಾರಾಯಣ ಗುರು ಅವರ ಚಳವಳಿ ಗಾಂಧೀಜಿಯನ್ನೂ ಸೆಳೆಯಿತು. ಕೇರಳಕ್ಕೆ ಆಗಮಿಸಿದಾಗ ಅವರು ನಾರಾಯಣ ಗುರುಗಳ ಭೇಟಿ ಮಾಡಿ ಅವರೊಂದಿಗೆ ನಡೆಸಿದ ಮಾತುಕತೆ ಇಂದಿಗೂ ಪ್ರಖ್ಯಾತವಾಗಿದೆ. ನಾರಾಯಣ ಗುರು ಅವರು ಜಾತಿ ವಿನಾಶವನ್ನು ಬಯಸಿದರು. ಒಂದೇ ಜಾತಿ, ಒಂದೇ ಕುಲ ಎನ್ನುವ ಮಾತಿನ ಉದ್ದೇಶವೇ ಅದು. ಅಷ್ಟೇ ಅಲ್ಲ, ವಿವಿಧ ವಿಗ್ರಹಗಳನ್ನು ಮುಂದಿಟ್ಟು ಜನರು ನಡೆಸುತ್ತಿರುವ ಶೋಷಣೆಯನ್ನು ತಪ್ಪಿಸಲು ಅವರು ನಿರಾಕಾರತೆಯನ್ನು ಪ್ರೋತ್ಸಾಹಿಸಿದರು. ದೇವಸ್ಥಾನದಲ್ಲಿ ಕನ್ನಡಿಯನ್ನು ಇಟ್ಟರು. ಇಂದಿಗೂ ವೈದಿಕ ಶಕ್ತಿಗಳಿಗೆ, ಆರೆಸ್ಸೆಸ್‌ನಂತಹ ಸಂಘಟನೆಗಳಿಗೆ ಕೇರಳದಲ್ಲಿ ನಾರಾಯಣ ಗುರುಗಳ ಚಿಂತನೆ ಬಹುದೊಡ್ಡ ತಡೆಗೋಡೆಯಾಗಿದೆ. ಈಗಾಗಲೇ ಆರೆಸ್ಸೆಸ್ ಕೇರಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಭಾಗವಾಗಿ ನಾರಾಯಣ ಗುರು ಅವರ ಮೂಲಸ್ಥಳವಾಗಿರುವ ಶಿವಗಿರಿಮಠವನ್ನು ಹೈಜಾಕ್ ಮಾಡುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಇದೇ ಸಂದರ್ಭದಲ್ಲಿ ನಾರಾಯಣ ಗುರುಗಳ ವೈದಿಕ ಸಿದ್ಧಾಂತದೊಳಗೆ ಸೇರ್ಪಡೆಗೊಳಿಸುವ ಪ್ರಯತ್ನಕ್ಕೂ ಆರೆಸ್ಸೆಸ್ ಇಳಿದಿದೆ. ಆರೆಸ್ಸೆಸ್ ಶಾಖೆಯೊಳಗೆ ಇಂತಹದೊಂದು ಪ್ರಯತ್ನ ಕಳೆದೆರಡು ದಶಕಗಳಿಂದ ನಡೆಯುತ್ತಿದೆ. ನಿಜವಾದ ನಾರಾಯಣಗುರುಗಳ ತತ್ವ, ಸಿದ್ಧಾಂತವನ್ನು ಮುಚ್ಚಿಟ್ಟು, ನಾರಾಯಣ ಗುರುಗಳು ಯಾವ ಸಿದ್ಧಾಂತದ ವಿರುದ್ಧ ತನ್ನ ಜೀವಮಾನವಿಡೀ ಹೋರಾಡಿದ್ದರೋ ಅದೇ ಸಿದ್ಧಾಂತಕ್ಕೆ ಬಿಲ್ಲವರೂ ಸೇರಿದಂತೆ ಕೆಳಜಾತಿಯ ಹುಡುಗರನ್ನು ಬಲಿಪಶುಗಳಾಗಿಸುವ ಪ್ರಯತ್ನ ಮತ್ತೆ ನಡೆಯುತ್ತಿದೆ. ಈಗಾಗಲೇ ನಾರಾಯಣ ಗುರುಗಳು ಸ್ಥಾಪಿಸಿರುವ ದೇವಸ್ಥಾನಗಳಲ್ಲಿ ಮತ್ತೆ ಜನಿವಾರ ಸಹಿತ ಅರ್ಚಕರು ಪ್ರವೇಶ ಪಡೆದಿದ್ದಾರೆ. ಶಾಂತಿಯಂತಹ ಕೆಳಜಾತಿಯ ಅರ್ಚಕರು ನಿಧಾನಕ್ಕೆ ಅಲ್ಲಿಂದ ಹೊರತಳ್ಳಲ್ಪಡುತ್ತಿದ್ದಾರೆ. ಇದರ ಜೊತೆಗೆ ನಾರಾಯಣ ಗುರುಗಳು ಯಾವ ಜಾತಿಯನ್ನು ನಿರಾಕರಿಸಿದ್ದರೋ, ಅದೇ ಜಾತಿಯನ್ನು ಮತ್ತೆ ಅನುಷ್ಠಾನಕ್ಕೆ ತರಲು ಆರೆಸ್ಸೆಸ್‌ನೊಳಗೆ ಸಿದ್ಧತೆ ನಡೆಯುತ್ತಿದೆ. ಆ ಗುರಿಯನ್ನು ಈಡೇರಿಸುವುದಕ್ಕಾಗಿ ಇತ್ತೀಚೆಗೆ ಸಂಘಪರಿವಾರದ ಸಂಘಟನೆಯಾದ ಭಾರತೀಯ ವಿಚಾರ ಕೇಂದ್ರವು ಒಂದು ನಿರ್ಣಯವನ್ನು ತೆಗೆದುಕೊಂಡಿದೆ. ಆ ನಿರ್ಣಯ ಏನು ಎಂದರೆ ‘ನಾರಾಯಣಗುರುಗಳು ಜಾತಿಯಿಲ್ಲ ಎಂದು ಎಲ್ಲೂ ಪ್ರಸ್ತಾಪಿಸಿಲ್ಲ’ ಎನ್ನುವುದು. ಅಂದರೆ ನಾರಾಯಣ ಗುರುಗಳು ನಿರಾಕರಿಸಿದ್ದ ಜಾತಿಯನ್ನು ಮತ್ತೆ ಅಸ್ತಿತ್ವಕ್ಕೆ ತರಲು ಮತ್ತು ಅದನ್ನು ನಾರಾಯಣ ಗುರುಗಳ ಹೆಸರಲ್ಲೇ ಕೆಳಜಾತಿಯ ಜನರ ತಲೆಗೆ ತುರುಕಲು ಆರೆಸ್ಸೆಸ್ ಹವಣಿಸುತ್ತಿದೆ. ಆರೆಸ್ಸೆಸ್‌ಗೆ ನಿಜಕ್ಕೂ ನಾರಾಯಣಗುರುಗಳ ಸಂದೇಶದ ಮೇಲೆ ಗೌರವವಿದ್ದರೆ ಅದನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಹರಿಸಬಹುದಿತ್ತು. ಮತ್ತು ಯಾವ ಸಮುದಾಯವನ್ನು ಮೇಲೆತ್ತಲು ಅವರು ಹವಣಿಸಿದರೂ ಆ ಸಮುದಾಯದ ಏಳಿಗೆಯ ಕಡೆಗೆ ಕಾರ್ಯಪ್ರವೃತ್ತರಾಗಿ ತಾವೂ ನಾರಾಯಣಗುರುಗಳ ಅನುಯಾಯಿಗಳು ಎನ್ನುವುದನ್ನು ಸಾಬೀತು ಮಾಡುವ ಅವಕಾಶವಿತ್ತು. ಆಗ ಖಂಡಿತವಾಗಿಯೂ ಕೇರಳದ ಈಳವರ ಸಹಿತ ಕೆಳಜಾತಿಯ ಜನರು ಆರೆಸ್ಸೆಸ್ಸನ್ನು ನಂಬುತ್ತಿದ್ದರೋ ಏನೋ? ಆದರೆ ಅವರು ನಾರಾಯಣಗುರುಗಳ ಸಂದೇಶವನ್ನೇ ತಿರುಚಲು ಹೊರಟಿದ್ದಾರೆ. ನಾರಾಯಣಗುರುಗಳು ಜಾತಿಯಿಲ್ಲ ಎನ್ನುವುದನ್ನು ಹೇಳಿಲ್ಲ ಎನ್ನುವುದನ್ನು ಸಾಬೀತು ಮಾಡಲು ಹೊರಟು ಮತ್ತೆ ಕೇರಳದಲ್ಲಿ ಜಾತೀಯತೆಯ ಹಿಂಸೆಯನ್ನು ಬಿತ್ತಲು, ಅಸ್ಪಶ್ಯತೆಯನ್ನು ಪ್ರೋತ್ಸಾಹಿಸಲು ಹೊರಟಿದ್ದಾರೆ. ಇದು ನೇರವಾಗಿ ನಾರಾಯಣ ಗುರುಗಳ ಮೇಲೆ ಆರೆಸ್ಸೆಸ್ ನಡೆಸಿದ ದಾಳಿಯಾಗಿದೆ. ಈ ಮೂಲಕ ಆರೆಸ್ಸೆಸ್‌ನ ಅಂತಿಮ ಉದ್ದೇಶ ಏನು ಎನ್ನುವುದು ಸಾಬೀತಾಗುತ್ತದೆ. ಆರೆಸ್ಸಸ್ ಜಾತಿಯನ್ನು, ವರ್ಣಾಶ್ರಮವನ್ನು ನಂಬುತ್ತದೆ. ಬ್ರಾಹ್ಮಣರ ಹಿರಿಮೆಯನ್ನೂ ಒಪ್ಪುತ್ತದೆ. ವರ್ಣಾಶ್ರಮದ ಮರುಸ್ಥಾಪನೆ ಆರೆಸ್ಸೆಸ್‌ನ ಗುರಿಯೂ ಆಗಿದೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ತಮ್ಮ ಸಿದ್ಧಾಂತವನ್ನು ಹರಡಬೇಕಾದರೆ ನಾರಾಯಣ ಗುರುವನ್ನು ವಿರೂಪಗೊಳಿಸಿ, ಅವರ ಬಾಯಿಯಿಂದಲೇ ಮನುವಾದವನ್ನು ಹೇಳಿಸಬೇಕಾಗಿದೆ. ಆರೆಸ್ಸೆಸ್‌ನ ಭಾಗವಾಗಿರುವ ಭಾರತೀಯ ವಿಚಾರ ಕೇಂದ್ರ ಈ ಕಾರಣದಿಂದಲೇ ಜಾತಿಯ ಕುರಿತಂತೆ ನಾರಾಯಣಗುರುಗಳ ನಿಲುವನ್ನು ತಿರುಚಿದೆ. ಇಂತಹದೊಂದು ನಿರ್ಣಯದಿಂದ ನಾರಾಯಣಗುರುಗಳಿಗಾಗಲೀ ಕೇರಳದ ಕೆಳಜಾತಿಯ ಜನರಿಗಾಗಲೀ ಏನು ಲಾಭ ಎನ್ನುವುದನ್ನು ಈವರೆಗೆ ವಿವರಿಸಿಲ್ಲ.
ಅತ್ಯಂತ ವಿಪರ್ಯಾಸವೆಂದರೆ, ಇದನ್ನು ಖಂಡತುಂಡವಾಗಿ ವಿರೋಧಿಸಬೇಕಾಗಿದ್ದ ಶ್ರೀನಾರಾಯಣ ಗುರು ಧರ್ಮ ಪರಿಪಾಲಕ ಸಮಿತಿಯ ಪ್ರಮುಖರು ವೌನವಾಗಿರುವುದು. ಯಾವ ಸಮುದಾಯವನ್ನು ಮೇಲ್ಜಾತಿಗಳ ಶೋಷಣೆಯಿಂದ ಮೇಲೆತ್ತಲು ನಾರಾಯಣಗುರುಗಳು ಹಗಲು ರಾತ್ರಿ ಹೋರಾಡಿದ್ದರೋ ಅದೇ ಸಮುದಾಯವನ್ನು ಮತ್ತೆ ಜಾತಿಯ ವರ್ತುಲದೊಳಗೆ ಸಿಲುಕಿಸಲು ಆರೆಸ್ಸೆಸ್ ಮುಂದಾಗಿರುವಾಗ ಅದನ್ನು ಪ್ರಬಲವಾಗಿ ಪ್ರತಿಭಟಿಸಬೇಕಾಗಿದ್ದ ಶಿವಗಿರಿ ಮಠ, ಎಸ್‌ಎನ್‌ಡಿಪಿ ತುಟಿ ಬಿಚ್ಚುವುದಕ್ಕೆ ಹಿಂದೇಟು ಹಾಕುತ್ತಿವೆ. ನಾರಾಯಣಗುರುಗಳು ಸ್ಥಾಪಿಸಿರುವ ಶಿವಗಿರಿ ಮಠವನ್ನು ಹೇಗೆ ಆರೆಸ್ಸೆಸ್ ಆಪೋಷನ ತೆಗೆದುಕೊಂಡಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಭಗತ್ ಸಿಂಗ್‌ನನ್ನು ನುಂಗಿ ಹಾಕಲು ವಿಫಲವಾದ ಸಂಘಪರಿವಾರ, ಅಂಬೇಡ್ಕರ್‌ರ ಚಿಂತನೆಗಳಿಗೆ ತನ್ನ ಮನುವಾದಿ ಚಿಂತನೆಗಳನ್ನು ಬೆರೆಸಿ ವಿರೂಪಗೊಳಿಸಲು ಯತ್ನಿಸಿ ವಿಫಲವಾಗಿರುವ ಆರೆಸ್ಸೆಸ್ ಈಗ ನಾರಾಯಣಗುರುಗಳ ಚಿಂತನೆಗಳಿಗೆ ಕೈ ಹಾಕಿದೆ. ಇದರಲ್ಲಿ ಯಶಸ್ವಿಯಾದರೆ ಅದು ನಾರಾಯಣಗುರುಗಳ ಹೋರಾಟದ ಹೀನಾಯ ಸೋಲಾಗುತ್ತದೆ ಮತ್ತು ನಾರಾಯಣಗುರುಗಳ ಅನುಯಾಯಿಗಳೇ ಆ ಸೋಲಿಗೆ ಕಾರಣರಾಗುತ್ತಾರೆ. ಆದುದರಿಂದ ನಾರಾಯಣಗುರುಗಳು ಹರಡಿದ್ದ ಒಂದೇ ಜಾತಿ, ಒಂದೇಕುಲ ತತ್ವವನ್ನು ಅನುಸರಿಸುವ ಸಕಲ ಮನುಷ್ಯರು ಒಂದಾಗಿ ಆರೆಸ್ಸೆಸ್‌ಸಂಚನ್ನು ವಿಫಲಗೊಳಿಸಬೇಕಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







