ತ್ರಿಪುರಾ ವಿಧಾನಸಭೆಯಲ್ಲಿ ಶಾಸಕನ ಹುಚ್ಚಾಟ..!

ಅಗರ್ತಲಾ, ಡಿ.20: ತ್ರಿಪುರಾ ವಿಧಾನಸಭೆಯಲ್ಲಿ ಟಿಎಂಸಿ ಶಾಸಕ ಸುದೀಪ್ ರಾಯ್ ಬರ್ಮನ್ ಅವರು ತನಗೆ ಮಾತನಾಡಲು ಅವಕಾಶ ಸಿಗದ ಸಿಟ್ಟಿನಿಂದ ಸ್ಪೀಕರ್ ಮುಂದೆ ಇರುವ ಲಾಂಛನವನ್ನು ಕಿತ್ತುಕೊಂಡು ಹೊರಕ್ಕೆ ಓಡಿದ ಘಟನೆ ಸೋಮವಾರ ನಡೆದಿದೆ.
ಸದನದಲ್ಲಿ ಅರಣ್ಯ ಸಚಿವ ನರೇಶ್ ಜಮಾಟಿಯಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಚರ್ಚೆಗೆ ಅವಕಾಶ ಸಿಗದಕ್ಕಾಗಿ ಸುದೀಪ್ ರಾಯ್ ಬರ್ಮನ್ ಅವರು ಸ್ಪೀಕರ್ ವೇದಿಕೆಯನ್ನು ಹತ್ತಿ ಅವರ ಮುಂದೆ ಇದ್ದ ಲಾಂಛನವನ್ನು ಹಿಡಿದು ಪರಾರಿಯಾದರು ಎನ್ನಲಾಗಿದೆ.
ಶೂನ್ಯ ವೇಳೆಯಲ್ಲಿ ಮಾಜಿ ವಿಪಕ್ಷ ನಾಯಕ ಬರ್ಮನ್ ಅವರು ಸ್ಥಳೀಯ ಬಂಗಾಳಿ ಪತ್ರಿಕೆಯಲ್ಲಿ ಸಚಿವ ನರೇಶ್ ಬಗ್ಗೆ ಬಂದಿರುವ ಲೈಂಗಿಕ ಹಗರಣ ವರದಿಯ ಬಗ್ಗೆ ಪ್ರಸ್ತಾಪಿಸಿದರು. ಆದರೆ ನರೇಶ್ ಅವರು ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದರು ಹಾಗೂ ತನ್ನ ವಿರುದ್ಧ ಅವಹೇಳನಕಾರಿ ವರದಿ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದರು.
ಈ ವಿಚಾರದಲ್ಲಿ ಗೃಹ ಖಾತೆಯನ್ನು ಹೊಂದಿರುವ ಮುಖ್ಯ ಮಂತ್ರಿ ಮಾಣಿಕ್ ಸರ್ಕಾರ್ ಹೇಳಿಕೆ ನೀಡುವಂತೆ ವಿಪಕ್ಷ ಕಾಂಗ್ರೆಸ್ ಮತ್ತು ಟಿಎಂಸಿ ಶಾಸಕರು ಒತ್ತಾಯಿಸಿದರು.ಆದರೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಇದರ ಬಗ್ಗೆ ಚರ್ಚೆ ಬೇಡ ಎಂದು ಮುಖ್ಯ ಮಂತ್ರಿ ಸರ್ಕಾರ್ ಹೇಳಿದರು.
ವಿಪಕ್ಷ ಶಾಸಕರು ಸದನದ ಬಾವಿಗಿಳಿದು ಸರಕಾರ ವಿರುದ್ಧ ಘೋಷಣೆ ಕೂಗುತ್ತಾ , ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು. ಆದರೆ ಸ್ಪೀಕರ್ ರಾಮೆಂದ್ರ ದೆಬ್ ನಾಥ್ ಅವಕಾಶ ನೀಡಲಿಲ್ಲ. ಆಗ ಸಿಟ್ಟಿನಿಂದ ಸುದೀಪ್ ರಾಯ್ ಸ್ಪೀಕರ್ ಅವರ ಪೀಠದತ್ತ ಧಾವಿಸಿ , ಅವರ ಮುಂದಿದ್ದ ಲಾಂಛನವನ್ನು ಕಿತ್ತುಕೊಂಡು ಪರಾರಿಯಾದರು. ಮಾರ್ಷಲ್‌ಗಳು ಕೂಡಲೇ ಅವರ ಹಿಂದೆ ಓಡಿ ಹಿಡಿಯಲು ಯತ್ನಿಸಿದರು. ಆದರೆ ಸುದೀಪ್ ರಾಯ್ ಸಭಾಂಗಣದ ಬಾಗಿಲು ತೆಗೆದು ಹೊರಗೆ ಓಡಿದರು. ಸ್ವಲ್ಪ ಹೊತ್ತಿನಲ್ಲಿ ಸದನಕ್ಕೆ ಆಗಮಿಸಿದ ಸುದೀಪ್ ರಾಯ್ ಅವರು ಸ್ಪೀಕರ್ ಬಳಿ ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದರು ಎಂದು ತಿಳಿದು ಬಂದಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.





