ಆದಾಯ ತೆರಿಗೆ ಪಾವತಿಸುವವರಿಗೆ ಶುಭ ಸುದ್ದಿ
ಈಗಿನ 2.50 ಲ.ರೂ.ನಿಂದ 4 ಲ.ರೂ.ಗೆ ಏರಿಕೆ?

ಹೊಸದಿಲ್ಲಿ,ಡಿ.20: ವಿತ್ತಸಚಿವ ಅರುಣ್ ಜೇಟ್ಲಿ ಅವರು ಮುಂಬರುವ ಮುಂಗಡಪತ್ರದಲ್ಲಿ ನೋಟು ರದ್ದತಿಯಿಂದ ಸಾಕಷ್ಟು ಬವಣೆ ಅನುಭವಿಸಿರುವ ವೇತನವರ್ಗ ಮತ್ತು ಮಧ್ಯಮವರ್ಗದ ಜನರಿಗೆ ಸವಿಸುದ್ದಿಯೊಂದನ್ನು ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಸರಕಾರವು ಭಾರತದ ಆದಾಯ ತೆರಿಗೆ ಸ್ವರೂಪವನ್ನು ಪುನರ್‌ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ.
ತೆರಿಗೆ ಹೇರಿಕೆಯ ಹಂತಗಳನ್ನು ಪರಿಷ್ಕರಿಸುವ ಮತ್ತು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ 2.50 ಲ.ರೂ.ಗಳಿಂದ 4 ಲ.ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿದ್ದು, ಇದಕ್ಕೆ ಹಸಿರು ನಿಶಾನೆ ದೊರಕಿದರೆ ಜನರಿಗೆ ಗಣನೀಯ ಪ್ರಮಾಣದಲ್ಲಿ ಹಣ ಉಳಿಯಲಿದೆ. ನೋಟು ರದ್ದತಿಯಿಂದುಂಟಾಗಿರುವ ತೊಂದರೆಗಳನ್ನು ಸಹಿಸಿಕೊಂಡಿರುವ ಪ್ರಾಮಾಣಿಕ ತೆರಿಗೆದಾತರಿಗೆ ಪುರಸ್ಕಾರದ ರೂಪದಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಲಿದೆ ಎನ್ನುವುದು ಆರ್ಥಿಕ ತಜ್ಞರ ವಿಶ್ಲೇಷಣೆ.
ಆದಾಯ ತೆರಿಗೆ ವಿನಾಯಿತಿ ಮಿತಿಯ ಏರಿಕೆಯೊಂದಿಗೆ ಆದಾಯದ ವಿವಿಧ ಹಂತಗಳಲ್ಲಿ ತೆರಿಗೆಯ ಪರಿಷ್ಕರಣೆಯಿಂದ ಜನರ ಕೈಯಲ್ಲಿ ಹೆಚ್ಚಿನ ದುಡ್ಡು ಓಡಾಡಲಿದೆ ಮತ್ತು ಇದು ಬಳಕೆದಾರ ವೆಚ್ಚದ ಜೊತೆ ಉಳಿತಾಯವನ್ನೂ ಹೆಚ್ಚಿಸಲಿದೆ.
ಪ್ರಸಕ್ತ ಮೂರು ಆದಾಯ ತೆರಿಗೆ ಹಂತಗಳಿವೆ. ವಾರ್ಷಿಕ 2.5 ಲ.ರೂ.ಗಳಿಗಿಂತ ಕಡಿಮೆ ಆದಾಯವಿರುವವರಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿಯಿದೆ. 2.5-5 ಲ.ರೂ. ಆದಾಯವುಳ್ಳವರಿಗೆ ಶೇ.10, 5-10 ಲ.ರೂ.ಆದಾಯವುಳ್ಳವರಿಗೆ ಶೇ.20 ಮತ್ತು 10 ಲ.ರೂ.ಗಿಂತ ಹೆಚ್ಚಿನ ಆದಾಯವುಳ್ಳವರಿಗೆ ಶೇ.30 ತೆರಿಗೆಯನ್ನು ವಿಧಿಸಲಾಗುತ್ತಿದೆ. ಇದರ ಜೊತೆಗೆ ವಾರ್ಷಿಕ ಒಂದು ಕೋ.ರೂ.ಗೂ ಅಧಿಕ ಆದಾಯವುಳ್ಳವರು ಶೇ.12ರಷ್ಟು ಹೆಚ್ಚುವರಿ ಮೇಲ್ತೆರಿಗೆಯನ್ನು ಪಾವತಿಸಬೇಕಾಗಿದೆ. ಸರಕಾರದ ಅಂಕಿಅಂಶಗಳಂತೆ 2014-15ರಲ್ಲಿ 48,000 ಜನರು ಮಾತ್ರ ತೆರಿಗೆಗೆ ಅರ್ಹ ವಾರ್ಷಿಕ ಒಂದು ಕೋ.ರೂ.ಗೂ ಅಧಿಕ ವರಮಾನವನ್ನು ಘೋಷಿಸಿದ್ದರು.
ಹೊಸ ತೆರಿಗೆ ಹಂತಗಳು ಮತ್ತು ವಿಧಿಸಬಹುದಾದ ತೆರಿಗೆ ದರಗಳನ್ನು ಸರಕಾರವೀಗ ಪರಿಶೀಲಿಸುತ್ತಿದೆ. ವಾರ್ಷಿಕ 10 ಕೋ.ರೂ.ಗೂ ಅಧಿಕ ಗಳಿಕೆಯುಳ್ಳವರಿಗೆ ಇನ್ನಷ್ಟು ಹೆಚ್ಚಿನ ‘ಸೂಪರ್ ರಿಚ್’ ತೆರಿಗೆಯನ್ನು ಸರಕಾರವು ವಿಧಿಸಬಹುದು.
ನೋಟು ರದ್ದತಿಯ ಬಳಿಕ ಜನರು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಇನ್ನೂ ಪರದಾಡುತ್ತಿರುವುದರಿಂದ ಬಳಕೆದಾರ ವಸ್ತುಗಳಿಗಾಗಿ ವೆಚ್ಚಗಳು ಕಡಿಮೆಯಾಗಿವೆ. ಕುಟುಂಬಗಳು ಮಾಡುವ ವೆಚ್ಚ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ಹೊಂದಿದೆ. ದೇಶದ ಜಿಡಿಪಿಗೆ ಅರ್ಧದಷ್ಟು ಕೊಡುಗೆಯನ್ನು ಕುಟುಂಬಗಳು ಮಾಡುವ ಬಳಕೆದಾರ ವೆಚ್ಚವೇ ನೀಡುತ್ತಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







