ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 75 ರನ್ ಗಳ ಜಯ
ಸರಣಿ 4-0 ಕ್ಲೀನ್ ಸ್ವೀಪ್ * ಕೊಹ್ಲಿ ನಾಯಕತ್ವದಲ್ಲಿ ಐದನೆ ಸರಣಿ ಜಯ* ಜಡೇಜ ಕಮಾಲ್

ಚೆನ್ನೈ, ಡಿ.20: ಇಲ್ಲಿ ನಡೆದ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಇನಿಂಗ್ಸ್ ಹಾಗೂ 75 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಐದು ಟೆಸ್ಟ್‌ಗಳ ಸರಣಿಯನ್ನು 4-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಚಿಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದ ಐದನೆ ಹಾಗೂ ಅಂತಿಮ ದಿನವಾಗಿರುವ ಇಂದು ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ (48ಕ್ಕೆ 7) ದಾಳಿಗೆ ಸಿಲುಕಿ 88 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟಾಗಿದೆ.
ತ್ರಿಶತಕ ದಾಖಲಿಸಿದ ಕರ್ನಾಟಕದ ಕರುಣ್ ನಾಯರ್ ಪಂದ್ಯಶ್ರೇಷ್ಠ ಮತ್ತು ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸತತ ಐದು ಟೆಸ್ಟ್ ಸರಣಿಗಳಲ್ಲಿ ದಿಗ್ವಿಜಯ ಸಾಧಿಸಿದ್ದು, ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಈ ವರ್ಷದ ಟೆಸ್ಟ್ ಸರಣಿಯನ್ನು ಕೊನೆಗೊಳಿಸಿದೆ.
ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಮುಂಬೈನಲ್ಲಿ ನಡೆದ ಮೂರನೆ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 400 ರನ್ ಗಳಿಸಿತ್ತು. ಆದರೆ ಇನಿಂಗ್ಸ್ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಐದನೆ ಟೆಸ್ಟ್‌ಲ್ಲೂ ಅದೇ ಸ್ಥಿತಿ ಮೊದಲ ಇನಿಂಗ್ಸ್‌ನಲ್ಲಿ 477 ರನ್ ಗಳಿಸಿತ್ತು. ಆದರೆ ಇನಿಂಗ್ಸ್ ತಪ್ಪಿಸುವ ಹೋರಾಟ ಫಲ ನೀಡಲಿಲ್ಲ.
ನಾಲ್ಕನೆ ದಿನ 282 ರನ್‌ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ನಾಯಕ ಅಲಿಸ್ಟರ್ ಕುಕ್ 3 ರನ್ ಮತ್ತು ಕೀಟನ್ ಜೆನ್ನಿಂಗ್ಸ್ 9 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಐದನೆ ದಿನವಾಗಿರುವ ಮಂಗಳವಾರ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 37 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 97 ರನ್ ಗಳಿಸಿತ್ತು. ಇಂಗ್ಲೆಂಡ್ ಸೋಲು ತಪ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿತ್ತು. ಟೆಸ್ಟ್ ನೀರಸ ಡ್ರಾದಲ್ಲಿ ಕೊನೆಗೊಳ್ಳುವ ಹಾದಿಯಲ್ಲಿದ್ದರೂ, ರವೀಂದ್ರ ಜಡೇಜ ಕೈಚಳಕದಲ್ಲಿ ಭಾರತಕ್ಕೆ ಗೆಲುವು ದೊರೆಯಿತು. ಟೆಸ್ಟ್‌ನಲ್ಲಿ ಮೊದಲ ಬಾರಿ 7 ವಿಕೆಟ್ ಕಬಳಿಸಿದ ಜಡೇಜ 2 ಕ್ಯಾಚ್ ಪಡೆದಿದ್ದರು.
ಅಂತಿಮ ದಿನದ ಅಂತಿಮ ಅವಧಿ ಆರಂಭಗೊಳ್ಳುವ ಹೊತ್ತಿಗೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡಿತ್ತು. ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಹೋರಾಟ ಮುಂದುವರಿಸಿದ್ದರು. ಬಳಿಕ ಇಂಗ್ಲೆಂಡ್‌ನ ಪ್ರಾಬಲ್ಯ ಕುಸಿಯಿತು.
103 ರನ್‌ಗಳ ಜೊತೆಯಾಟ: ಆರಂಭಿಕ ದಾಂಡಿಗರಾದ ನಾಯಕ ಕುಕ್ ಮತ್ತು ಜೆನ್ನಿಂಗ್ಸ್ ಮೊದಲ ವಿಕೆಟ್‌ಗೆ 39.4 ಓವರ್‌ಗಳಲ್ಲಿ 103 ರನ್ ಗಳಿಸಿದ್ದರು. ರವೀಂದ್ರ ಜಡೇಜ ಅವರು ಕುಕ್‌ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಇಂಗ್ಲೆಂಡ್‌ಗೆ ಮೊದಲ ಆಘಾತ ನೀಡಿದರು. ಕುಕ್ 134 ಎಸೆತಗಳನ್ನು ಎದುರಿಸಿ 4 ಬೌಂಡರಿಗಳ ಸಹಾಯದಿಂದ 49 ರನ್ ಗಳಿಸಿದರು. ಕುಕ್ ಅರ್ಧಶತಕ ವಂಚಿತಗೊಡರು. ಆದರೆ ಜೆನ್ನಿಂಗ್ಸ್ ಅರ್ಧಶತಕ ದಾಖಲಿಸಿದರು. 43.ನೆ ಓವರ್‌ನಲ್ಲಿ ಜೆನ್ನಿಂಗ್ಸ್ ಅವರು ಜಡೇಜಗೆ ರಿಟರ್ನ್ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 43.4 ಓವರ್‌ಗಳಲ್ಲಿ 110 ಆಗಿತ್ತು.
ಜೋ ರೂಟ್ ತಂಡದ ಸೋಲು ತಪ್ಪಿಸುವ ಹೋರಾಟ ನಡೆಸುವ ಯೋಜನೆಯಲ್ಲಿದ್ದಾಗ ಜಡೇಜ ಅದಕ್ಕೆ ಅವಕಾಶ ನೀಡಲಿಲ್ಲ. ರೂಟ್ 22 ಎಸೆತಗಳನ್ನು ಎದುರಿಸಿ 6 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು. ರೂಟ್ ನಿರ್ಗಮನದ ಬಳಿಕ ಆಗಮಿಸಿದ ಬೈರ್‌ಸ್ಟೋವ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 1 ರನ್ ಗಳಿಸಿ ಇಶಾಂತ್ ಶರ್ಮ ಎಸೆತದಲ್ಲಿ ಜಡೇಜಗೆ ಕ್ಯಾಚ್ ನೀಡಿದರು. ಅಲಿ-ಸ್ಟೋಕ್ಸ್ ಹೋರಾಟ: 52.2ಓವರ್‌ಗಳಲ್ಲಿ ಇಂಗ್ಲೆಂಡ್ 4 ವಿಕೆಟ್ ನಷ್ಟದಲ್ಲಿ 129 ರನ್ ಮಾಡಿದ್ದಾಗ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಜೊತೆಯಾದರು. ಇವರ ಬ್ಯಾಟಿಂಗ್‌ನಲ್ಲಿ ಇಂಗ್ಲೆಂಡ್‌ನ ಖಾತೆಗೆ 63 ರನ್ ಸೇರ್ಪಡೆಗೊಂಡಿತ್ತು.
ಜಡೇಜ ಅವರು 71.2ನೆ ಓವರ್‌ನಲ್ಲಿ ಅಲಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅಲ್ಲಿಗೆ ಇಂಗ್ಲೆಂಡ್‌ನ ಹೋರಾಟ ಬಹುತೇಕ ಅಂತ್ಯಗೊಂಡಿತ್ತು. ಅಲಿ ನಿರ್ಗಮಿಸಿದ ಬೆನ್ನಲ್ಲೆ ಸ್ಟೋಕ್ಸ್(23) ಪೆವಿಲಿಯನ್ ಸೇರಿದರು.
ಡಾಸನ್(0) ಅವರು ಅಮಿತ್ ಮಿಶ್ರಾ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು. ಆದಿಲ್ ರಶೀದ್(2), ಸ್ಟುವರ್ಟ್ ಬ್ರಾಡ್(1), ಜಾಕ್ ಬಾಲ್(0) ಅವರ ವಿಕೆಟ್ ನ್ನು ಕಿತ್ತ ಜಡೇಜ ಇಂಗ್ಲೆಂಡ್‌ನ ಎರಡನೆ ಇನಿಂಗ್ಸ್ ಮುಗಿಸಿದರು. ಬಟ್ಲರ್ 6 ರನ್ ಗಳಿಸಿ ಔಟಾಗದೆ ಉಳಿದರು. ಅವರು 6 ರನ್‌ಗಳನ್ನು ಗಳಿಸಲು 50 ಎಸೆತಗಳನ್ನು ಎದುರಿಸಿದ್ದರು.87.6ನೆ ಓವರ್‌ನಲ್ಲಿ ಜಡೇಜ ಎಸೆತದಲ್ಲಿ ಜಾಕ್ ಬಾಲ್ ಅವರು ತ್ರಿಶತಕದ ವೀರ ಕರುಣ್ ನಾಯರ್ ಕ್ಯಾಚ್ ನೀಡುವುದರೊಂದಿಗೆ ಇಂಗ್ಲೆಂಡ್‌ನ ಐದು ಟೆಸ್ಟ್‌ಗಳ ಸರಣಿ ಹೀನಾಯ ಸೋಲಿನೊಂದಿಗೆ ಕೊನೆಗೊಂಡಿತು.
ಭಾರತದ ರವೀಂದ್ರ ಜಡೇಜ 48ಕ್ಕೆ 7 ವಿಕೆಟ್, ಇಶಾಂತ್ ಶರ್ಮ 17ಕ್ಕೆ 1, ಉಮೇಶ್ ಯಾದವ್ 36ಕ್ಕೆ 1 ಮತ್ತು ಅಮಿತ್ ಮಿಶ್ರಾ 30ಕ್ಕೆ 1 ವಿಕೆಟ್ ಪಡೆದರು.ತವರಿನಲ್ಲಿ ಅಶ್ವಿನ್‌ಗೆ ವಿಕೆಟ್ ದಕ್ಕಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಅವರು ಒಂದು ವಿಕೆಟ್ ಪಡೆದಿದ್ದರು.
ಜಡೇಜ ಮೊದಲ ಇನಿಂಗ್ಸ್‌ನಲ್ಲಿ 106ಕ್ಕೆ 3 ವಿಕೆಟ್ ಪಡೆದಿದ್ದರು. ಇದರೊಂದಿಗೆ ಎರಡೂ ಇನಿಂಗ್ಸ್‌ಗಳಲ್ಲಿ ಅವರ ಖಾತೆಗೆ 10 ವಿಕೆಟ್‌ಗಳು ಸೇರ್ಪಡೆಗೊಂಡಿತು.
,,,,,,,,
18 ಟೆಸ್ಟ್‌ಗಳಲ್ಲಿ ಗೆಲುವಿನ ಅಜೇಯ ಓಟ
ಇಂಗ್ಲೆಂಡ್ ವಿರುದ್ಧ ಭಾರತ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಹದಿನೆಂಟು ಟೆಸ್ಟ್ ಪಂದ್ಯಗಳಲ್ಲಿ ಗೆಲುವಿನ ಅಜೇಯ ಓಟ ಮುಂದುವರಿಸಿದೆ.
ನಾಲ್ಕನೆ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ್ನು ಭಾರತ ಸೋಲಿಸುವ ಮೂಲಕ ಸತತ ಐದು ಸರಣಿಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ 17 ಟೆಸ್ಟ್‌ಗಳಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿತ್ತು.
ಗಾಲೆಯಲ್ಲಿ ಭಾರತ ಆಗಸ್ಟ್ 2015ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 63 ರನ್‌ಗಳ ಸೋಲು ಅನುಭವಿಸಿತ್ತು. ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ಬಳಿಕ ಶ್ರೀಲಂಕಾವನ್ನು 2-1 ಅಂತರದಲ್ಲಿ ಮಣಿಸಿ ಸರಣಿಯನ್ನು ಗೆದ್ದುಕೊಂಡಿತ್ತು. ತವರಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧಿಸಿದ ಭಾರತ ಬಳಿಕ ವೆಸ್ಟ್‌ಇಂಡೀಸ್ ವಿರುದ್ಧ 2-0, ನ್ಯೂಝಿಲೆಂಡ್ ವಿರುದ್ಧ 3-0 ಮತ್ತು ಇದೀಗ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 4-0 ಗೆಲುವಿನ ದಾಖಲೆ ಬರೆದಿದೆ.
ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಐದನೆ ಟೆಸ್ಟ್‌ನಲ್ಲಿ ಭಾರತ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಟೆಸ್ಟ್‌ನ ಐದನೆ ದಿನ ವಿಕೆಟ್ ನಷ್ಟವಿಲ್ಲದೆ 103 ರನ್ ಗಳಿಸಿದ್ದ ಇಂಗ್ಲೆಂಡ್ ಬಳಿಕ ದಿಢೀರನೆ ಕುಸಿತಕ್ಕೊಳಗಾಗಿ ಸೋಲು ಅನುಭವಿಸಿತ್ತು. ರವೀಂದ್ರ ಜಡೇಜ ಅವರು ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟರ್ ಕುಕ್ ಅವರನ್ನು ಸರಣಿಯಲ್ಲಿ ಆರನೆ ಬಾರಿ ಪೆವಿಲಿಯನ್‌ಗಟ್ಟುವ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡಿ ಭಾರತದ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಜಡೇಜ ಇಂಗ್ಲೆಂಡ್‌ನ್ನು 207 ರನ್‌ಗಳಿಗೆ ಗಂಟು ಮೂಟೆ ಕಟ್ಟುವಂತೆ ಮಾಡಿದರು.ಅವರು ಸ್ಟಾರ್ ಬೌಲರ್ ಆಗಿ ಹೊರಹೊಮ್ಮಿದರು. ಅಂತಿಮ ದಿನ ಜಡೇಜ ತಂಡಕ್ಕೆ ಅನನ್ಯ ಕೊಡುಗೆ ನೀಡಿದರು.
ವೆಸ್ಟ್‌ಇಂಡೀಸ್ 1982ರಿಂದ 1984ರ ತನಕ 27 ಟೆಸ್ಟ್‌ಗಳಲ್ಲಿ ಸತತ ಗೆಲುವಿನ ದಾಖಲೆ ಬರೆದಿತ್ತು. ಭಾರತ ಇನ್ನು 4 ಟೆಸ್ಟ್ ಸರಣಿಗಳಲ್ಲಿ ಜಯಿಸಿದರೆ ಇಂಗ್ಲೆಂಡ್ 1884ರಿಂದ 1892ರ ತನಕ ಮತ್ತು ಆಸ್ಟ್ರೇಲಿಯ 2005ರಿಂದ 2008ರ ತನಕ ಗಳಿಸಿದ್ದ 9 ಟೆಸ್ಟ್ ಸರಣಿಗಳಲ್ಲಿ ಗೆಲುವಿನ ದಾಖಲೆಯನ್ನು ಸರಿಗಟ್ಟುವ ಅವಕಾಶ ಇದೆ.
ಭಾರತ 1977ರಿಂದ 1980ರ ತನಕ ತವರಿನಲ್ಲಿ 20 ಟೆಸ್ಟ್‌ಗಳಲ್ಲಿ ಜಯ ಗಳಿಸಿತ್ತು. ಈ ದಾಖಲೆಯನ್ನು ಮುರಿಯಲು ಕೊಹ್ಲಿ ನೋಡುತ್ತಿದ್ದಾರೆ. 2017ರಲ್ಲಿ ಬಾಂಗ್ಲಾದೇಶ ವಿರುದ್ಧ 1ಟೆಸ್ಟ್ , ಆಸ್ಟ್ರೇಲಿಯ ವಿರುದ್ಧ ಫೆಬ್ರವರಿ-ಮಾರ್ಚ್ 2017ರಲ್ಲಿ 4 ಟೆಸ್ಟ್ ಪಂದ್ಯಗಳು ನಿಗದಿಯಾಗಿದೆ.
ಅಲಿಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ತಂಡ 2012 ಡಿಸೆಂಬರ್‌ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾವನ್ನು ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಬಳಿಕ ಭಾರತ ತವರಿನಲ್ಲಿ ಆಡಿದ್ದ 19 ಪಂದ್ಯಗಳಲ್ಲಿ ಸೋಲು ಅನುಭವಿಸಲಿಲ್ಲ. 16ರಲ್ಲಿ ಗೆಲುವು ಮತ್ತು 3 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. 2013ರಲ್ಲಿ ಆಸ್ಟ್ರೇಲಿಯ ವಿರುದ್ಧ 4-0 ಜಯ, 2013ರಲ್ಲಿ ವಿಂಡೀಸ್ ವಿರುದ್ಧ 2-0, 2015ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 3-0, ಮತ್ತು ನ್ಯೂಝಿಲೆಂಡ್ ವಿರುದ್ಧ 3-0 ಮತ್ತು ಇಂಗ್ಲೆಂಡ್ ವಿರುದ್ಧ 4-0 ಜಯ ಗಳಿಸಿತು. ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಧೋನಿ ನಾಯಕತ್ವ ವಹಿಸಿದ್ದು. ಬಳಿಕ ಮೂರು ಸರಣಿಗಳಿಗೆ ಕೊಹ್ಲಿ ನಾಯಕರಾಗಿದ್ಧಾರೆ.
2012 ಡಿಸೆಂಬರ್‌ನಲ್ಲಿ ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಎರಡನೆ ಟೆಸ್ಟ್ ನಾಲ್ಕು ದಿನಗಳು ಮಳೆಗಾಹುತಿಯಾದ ಹಿನ್ನೆಲೆಯಲ್ಲಿ ಡ್ರಾದಲ್ಲಿ ಕೊನೆಗೊಂಡಿತ್ತು. ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು.
1997 ,ಜ.28ರಿಂದ 1980 ಫೆ. 3ರ ತನಕ 20 ಟೆಸ್ಟ್‌ಗಳಲ್ಲಿ ಭಾರತ ಬಿಷನ್ ಸಿಂಗ್ ಬೇಡಿ ,ಸುನೀಲ್ ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥ್ ನಾಯಕತ್ವದಲ್ಲಿ ಗೆಲುವು ದಾಖಲಿಸಿತ್ತು. ಇಂಗ್ಲೆಂಡ್ ವಿರುದ್ಧ 2, ವೆಸ್ಟ್‌ಇಂಡೀಸ್ ವಿರುದ್ಧ 6, ಆಸ್ಟ್ರೇಲಿಯ ವಿರುದ್ಧ 6 ಮತ್ತು ಪಾಕಿಸ್ತಾನ ವಿರುದ್ಧ 6 ಟೆಸ್ಟ್‌ಗಳಲ್ಲಿ ಭಾರತ ಸೋಲು ಕಾಣಲಿಲ್ಲ.
,,,,,,,,,,,,,
ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತಕ್ಕೆ ನಂ.1 ಸ್ಥಾನ ಸುಭದ್ರ
ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್‌ನಲ್ಲಿ 4-0 ಗೆಲುವಿನೊಂದಿಗೆ 2016ರಲ್ಲಿ ಟೆಸ್ಟ್ ಸರಣಿಯನ್ನು ಕೊನೆಗೊಳಿಸಿದ್ದು, ನಂ.1 ಟೆಸ್ಟ್ ತಂಡವಾಗಿ 2017ರಲ್ಲಿ ಸರಣಿ ಆರಂಭಿಸಲಿದೆ.
ಇಂಗ್ಲೆಂಡ್ ವಿರುದ್ಧ ಗೆಲುವಿನೊಂದಿಗೆ ಭಾರತಕ್ಕೆ 5 ಪಾಯಿಂಟ್‌ಗಳನ್ನು ಗಳಿಸಿದ್ದು, ಭಾರತ ಪ್ರಸಕ್ತ 120 ಪಾಯಿಂಟ್ ಹೊಂದಿದ್ದು, ಎರಡನೆ ಸ್ಥಾನದಲ್ಲಿರುವ ಆಸ್ಟ್ರೇಲಿಯಕ್ಕಿಂತ 15 ಪಾಯಿಂಟ್ ಮುಂದಿದೆ.
ಆಸ್ಟ್ರೇಲಿಯ 105, ಇಂಗ್ಲೆಂಡ್ 101, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕ 102 ಪಾಯಿಂಟ್‌ಗಳೊಂದಿಗೆ ಮೂರನೆ ಸ್ಥಾನ ಹೊಂದಿವೆ.ೆ.ಎಪ್ರಿಲ್ 1, 2017ರಲ್ಲಿ ನಂ.1 ಸ್ಥಾನದಲ್ಲಿರುವ ತಂಡ 10 ಲಕ್ಷ ಯುಎಸ್ ಡಾಲರ್ (1 ಮಿಲಿಯನ್)ಮೊತ್ತದ ನಗದು ಪುರಸ್ಕಾರ ಪಡೆಯಲಿದೆ. ಎರಡನೆ ಸ್ಥಾನ ಪಡೆದ ತಂಡ 5 ಲಕ್ಷ ಯುಎಸ್ ಡಾಲರ್, ಮೂರು ಮತ್ತು ನಾಲ್ಕನೆ ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ 2 ಲಕ್ಷ ಡಾಲರ್ ಮತ್ತು 1 ಲಕ್ಷ ಡಾಲರ್ ಮೊತ್ತದ ಪ್ರಶಸ್ತಿಯನ್ನು ಪಡೆಯಲಿದೆ.
,,,,,,,,,,,,,,,
ಅಂಕಿ-ಅಂಶ
*2750: ಅಲಿಸ್ಟರ್ ಕುಕ್ ಏಷ್ಯಾದಲ್ಲಿ 2,750 ರನ್ ಸಂಪಾದಿಸಿದ್ದಾರೆ.
*3: ಕೀಟನ್ ಜೆನ್ನಿಂಗ್ಸ್ ಭಾರತದಲ್ಲಿ ಚೊಚ್ಚಲ ಶತಕ ಮತ್ತು 1 ಅರ್ಧಶತಕ ದಾಖಲಿಸಿದ ಮೂರನೆ ವಿದೇಶಿ ಆಟಗಾರ.
*477: ಇಂಗ್ಲೆಂಡ್ ಚೆನ್ನೈನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 477 ರನ್ ಗಳಿಸಿದ್ದರೂ, ಇನಿಂಗ್ಸ್ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
*22: ಅಲಿೆಸ್ಟರ್ ಕುಕ್ ನಾಯಕತ್ವದಲ್ಲಿ ಇಂಗ್ಲೆಂಡ್ ಆಡಿರುವ 59 ಟೆಸ್ಟ್‌ಗಳ ಪೈಕಿ 22ರಲ್ಲಿ ಸೋಲು ಅನುಭವಿಸಿದೆ.
*17: ರವೀಂದ್ರ ಜಡೇಜ ಭಾರತ ತವರಿನಲ್ಲಿ ಜಯಿಸಿದ 17 ಪಂದ್ಯಗಳಲ್ಲಿ ಗೆಲುವಿಗೆ ಶ್ರಮಿಸಿದ್ದರು.
*ಇನಿಂಗ್ಸ್ , 75 ರನ್: ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 75 ರನ್ ಗೆಲುವಿನೊಂದಿಗೆ ದೊಡ್ಡ ಗೆಲುವಿನ ದಾಖಲೆ ಬರೆದಿದೆ.
*2: ಭಾರತ ಎರಡನೆ ಬಾರಿ 4-0 ಅಂತರದಲ್ಲಿ ಸರಣಿ ಜಯಿಸಿದೆ.
*48ಕ್ಕೆ 7: ರವೀಂದ್ರ ಜಡೇಜ 48ಕ್ಕೆ 7 ವಿಕೆಟ್ ಪಡೆದಿರುವುದು ಜೀವನಶ್ರೇಷ್ಠ ಪ್ರದರ್ಶನ.
*1: ತವರಿನ ಕ್ರೀಡಾಂಗಣವಾಗಿರುವ ಚೆನ್ನೈನಲ್ಲಿ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ 1 ವಿಕೆಟ್ ಪಡೆದಿದ್ದಾರೆ.
*1: ಒಂದು ಟೆಸ್ಟ್‌ನಲ್ಲಿ 50 ರನ್, 10 ವಿಕೆಟ್ ಮತ್ತು 4 ಕ್ಯಾಚ್‌ಗಳನ್ನು ಪಡೆದ ಮೊದಲ ಬೌಲರ್ ಅಶ್ವಿನ್.
*4: ಕಳೆದ 37 ವರ್ಷಗಳಲ್ಲಿ 4 ಸರಣಿಗಳಲ್ಲಿ ತಲಾ ಇಬ್ಬರು ಬೌಲರ್‌ಗಳು 25ಕ್ಕಿಂತ ಅಧಿಕ ವಿಕೆಟ್ ಪಡೆದಿದ್ದಾರೆ.
*2: ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 400 ಮತ್ತು ಅದಕ್ಕಿಂತ ಹೆಚ್ಚು ರನ್ ದಾಖಲಿಸಿದ್ದರೂ, ಸತತ ಎರಡು ಟೆಸ್ಟ್‌ಗಳಳ್ಲಿ ಸೋಲು ಅನುಭವಿಸಿದ ಎರಡನೆ ತಂಡ.
*4: ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ 4 ಪಂದ್ಯಗಳಲ್ಲೂ ಭಾರತ ಜಯ ಗಳಿಸಿದೆ.
*9: ಭಾರತ 2016ರಲ್ಲಿ 9 ಟೆಸ್ಟ್‌ಗಳಲ್ಲಿ ಜಯ ಗಳಿಸಿದೆ.
*14: ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ 14 ಪಂದ್ಯಗಳಲ್ಲಿ ಜಯಗಳಿಸಿದೆ.
,,,,,,,,,,,,,,,
ಸರಣಿಯ ಹೈಲೈಟ್ಸ್
*ಭಾರತ (759/7) ಚೆನ್ನೈ ಟೆಸ್ಟ್‌ನಲ್ಲಿ ಗರಿಷ್ಠ ರನ್ ದಾಖಲಿಸಿತ್ತು.
*ಕರುಣ್ ನಾಯರ್ ತ್ರಿಶತಕ ದಾಖಲಿಸಿದ ಭಾರತದ ಎರಡನೆ ದಾಂಡಿಗ.
*ವಿರಾಟ್ ಕೊಹ್ಲಿ ಸರಣಿಯಲ್ಲಿ 655 ರನ್ ದಾಖಲಿಸಿದ್ದಾರೆ.
*ಕೊಹ್ಲಿ ಒಂದೇ ವರ್ಷ ಮೂರು ದ್ವಿಶತಕ ದಾಖಲಿಸಿದ ಭಾರತದ ಮೊದಲ ನಾಯಕ. ಮುಂಬೈ ನಡೆದ 4 ಟೆಸ್ಟ್‌ನಲ್ಲಿ 235 ರನ್ ಗಳಿಸಿದ್ದರು.
*ಆರ್.ಅಶ್ವಿನ್ 306 ರನ್ ಮತ್ತು 28 ವಿಕೆಟ್ ಪಡೆದಿದ್ದರು.
*ಚೇತೇಶ್ವರ ಪೂಜಾರ ಮತ್ತು ಮುರಳಿ ವಿಜಯ್ ಈ ಟೆಸ್ಟ್ ಸರಣಿಯಲ್ಲಿ 3,000 ರನ್ ಪೂರೈಸಿದ್ದರು. ಇದರೊಂದಿಗೆ ಸಾಧನೆ ಮಾಡಿದ 20 ಮತ್ತು 21ನೆ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.
*ವಿರಾಟ್ ಕೊಹ್ಲಿ 4,000 ರನ್ ಪೂರ್ಣಗೊಳಿಸಿದ ಭಾರತದ 14ನೆ ದಾಂಡಿಗ.
*1993ರಲ್ಲಿ ಇಂಗ್ಲೆಂಡ್ ವಿರುದ್ಧ ಮಹಮ್ಮದ್ ಅಝರುದ್ದಿನ್ ನಾಯಕತ್ವದ ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು.
*2008ರ ಬಳಿಕ ಇಂಗ್ಲೆಂಡ್ ವಿರುದ್ಧ ಭಾರತ ಮೊದಲ ಸರಣಿ ಗೆಲುವು ದಾಖಲಿಸಿದೆ.
,,,,,,,,,,,
ಸ್ಟೋರ್ ಪಟ್ಟಿ
ಇಂಗ್ಲೆಂಡ್ ಮೊದಲ ಇನಿಂಗ್ಸ್ 477
ಭಾರತ ಮೊದಲ ಇನಿಂಗ್ಸ್ 190.4 ಓವರ್‌ಗಳಲ್ಲಿ 759 /7 ಡಿಕ್ಲೇರ್
ಇಂಗ್ಲೆಂಡ್ ಎರಡನೆ ಇನಿಂಗ್ಸ್ 88 ಓವರ್‌ಗಳಲ್ಲಿ ಆಲೌಟ್ 207
ಕುಕ್ ಸಿ ರಾಹುಲ್ ಬಿ ಜಡೇಜ 49
ಜೆನ್ನಿಂಗ್ಸ್ ಸಿ ಆ್ಯಂಡ್ ಬಿ ಜಡೇಜ 54
ರೂಟ್ ಎಲ್‌ಬಿಡಬ್ಲು ಬಿ ಜಡೇಜ 06
ಎಂಎಂ ಅಲಿ ಸಿ ಅಶ್ವಿನ್ ಬಿ ಜಡೇಜ 44
ಬೈರ್‌ಸ್ಟೋವ್ ಸಿ ಜಡೇಜ ಬಿ ಶರ್ಮ 01
ಸ್ಟೋಕ್ಸ್‌ಸಿ ನಾಯರ್ ಬಿ ಜಡೇಜ 23
ಬಟ್ಲರ್ ಔಟಾಗದೆ 06
ಡಾಸನ್ ಬಿ ಮಿಶ್ರಾ 00
ರಶೀದ್ ಸಿ ಜಡೇಜ ಬಿ ಯಾದವ್ 02
ಬ್ರಾಡ್ ಸಿ ಪೂಜಾರ ಬಿ ಯಾದವ್01
ಜಾಕ್‌ಬಾಲ್ ಸಿ ನಾಯರ್ ಬಿ ಜಡೇಜ00
ಇತರೆ21
ವಿಕೆಟ್ ಪತನ: 1-103, 2-110, 3-126, 4-129, 5-192, 6-193, 7-196, 8-200, 9-207, 10-207
ಬೌಲಿಂಗ್ ವಿವರ
ಇಶಾಂತ್ ಶರ್ಮ10-2-17-1
ರವಿಚಂದ್ರನ್ ಅಶ್ವಿನ್25-6-56-0
ರವೀಂದ್ರ ಜಡೇಜ25-5-47-7
ಉಮೇಶ್ ಯಾದವ್ 14-1-36-1
ಅಮಿತ್ ಮಿಶ್ರಾ14-4-30-1
ಪಂದ್ಯಶ್ರೇಷ್ಠ: ಕರುಣ್ ನಾಯರ್
ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







