ನೋಟು ರದ್ದತಿಯಿಂದ ಒತ್ತಡ: ಬ್ಯಾಂಕ್ ಒಕ್ಕೂಟಗಳಿಂದ ಚಳವಳಿಗೆ ಕರೆ

ಹೊಸದಿಲ್ಲಿ, ಡಿ.20: ನೋಟು ರದ್ದತಿಯ ಕಾರಣದಿಂದ ಹಲವು ಬ್ಯಾಂಕ್‌ಗಳು ಹಾಗೂ ಅವುಗಳ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಯ ವಿರುದ್ಧ ಪ್ರದರ್ಶನವೊಂದನ್ನು ನಡೆಸಲು ಅಖಿಲಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ) ಹಾಗೂ ಅಖಿಲಭಾರತ ಬ್ಯಾಂಕ್ ಅಧಿಕಾರಿಗಳ ಸಂಘಗಳು(ಎಐಬಿಇಎ) ಕರೆಯೊಂದನ್ನು ನೀಡಿವೆ.
ಡಿ.28ರಂದು ಈ ಪ್ರದರ್ಶನ ನಡೆಸಲು ಅವು ಯೋಜನೆ ಹಾಕಿಕೊಂಡಿವೆ. ಈ ಸಂಘಟನೆಗಳು ಡಿ.29ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಪತ್ರವೊಂದನ್ನೂ ಬರೆಯಲು ನಿರ್ಧರಿಸಿವೆ. 2017ರ ಜನವರಿ 2 ಹಾಗೂ 3ರಂದು ಈ ವಿಷಯದಲ್ಲಿ ಪ್ರದರ್ಶನ ನಡೆಸಲು ಸಹ ಅವು ಯೋಜನೆ ಹಾಕಿವೆ.
ತಮ್ಮ ಸಂಘಟನೆಗಳ ಕರೆಯಂತೆ, ತಮ್ಮ ಘಟಕಗಳು ಈಗಾಗಲೇ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಪ್ರದರ್ಶನಗಳನ್ನು ನಡೆಸಿವೆ ಹಾಗೂ ತಮ್ಮ ಮನವಿಯನ್ನು ನೀಡಲು ಆರ್‌ಬಿಐಯ ಸ್ಥಳೀಯ ಕಾರ್ಯವಾಹಿಗಳನ್ನು ಭೇಟಿಯಾಗಿದ್ದಾರೆಂದು ಎಐಬಿಇಎಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹಾಗೂ ಎಐಬಿಒಎಯ ಅವರ ಸೋದ್ಯೋಗಿ ಎಸ್. ನಾಗರಾಜನ್ ಮಂಗಳವಾರ ಹೊರಡಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಎಲ್ಲ ಬ್ಯಾಂಕ್‌ಗಳು ಹಾಗೂ ಶಾಖೆಗಳಿಗೆ ಸಾಕಷ್ಟು ನಗದು ಪೂರೈಕೆಯನ್ನು ಖಚಿತಪಡಿಸಬೇಕು. ಇನ್ನಷ್ಟು ವಿಳಂಬಿಸದೆ ಎಲ್ಲ ಎಟಿಎಂಗಳು ಕಾರ್ಯಾಚರಣೆ ನಡೆಸುವಂತೆ ಮಾಡಬೇಕು. ಬ್ಯಾಂಕ್‌ಗಳಿಗೆ ನಗದು ಪೂರೈಕೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕೆಂದು ಸಂಘಟನೆಗಳು ಆಗ್ರಹಿಸಿವೆ.
ಸಾಕಷ್ಟು ನಗದನ್ನು ಬ್ಯಾಂಕ್‌ಗಳಿಗೆ ಪೂರೈಸಲು ಆರ್‌ಬಿಐಯಿಂದ ಸಾಧ್ಯವಾಗುವವರೆಗೆ, ಬ್ಯಾಂಕ್ ಶಾಖೆಗಳಲ್ಲಿ ನಗದು ವ್ಯವಹಾರವನ್ನು ಅಮಾನತುಪಡಿಸುವ ನಿರ್ಧಾರ ಕೈಗೊಳ್ಳಬೇಕು. ಬ್ಯಾಂಕ್ ಶಾಖೆಗಳಿಗೆ ನಗದು ಲಭ್ಯವಿಲ್ಲದಿರುವಾಗ ಕೆಲವು ಜನರಲ್ಲಿದ್ದ ಭಾರೀ ಪ್ರಮಾಣದ ಹೊಸ ನೋಟುಗಳ ವಶೀಕರಣ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಬ್ಯಾಂಕ್ ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ತಪ್ಪಿಸಲು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ಅವರಿಗೆ ಆರ್‌ಬಿಐ ಹಾಗೂ ರಾಜ್ಯ ಸರಕಾರಗಳು ಸುರಕ್ಷೆ ಹಾಗೂ ರಕ್ಷಣೆಯೊದಗಿಸಬೇಕೆಂದು ಅವು ಒತ್ತಾಯಿಸಿವೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







