ಜಿಪಂ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರ ಧರಣಿ
.jpg)
ಮಂಗಳೂರು, ಡಿ.20: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ. ಜಿಪಂ ಕಚೇರಿ ಮುಂದೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘವು ಧರಣಿ ನಡೆಸಿತು.
ಇದಕ್ಕೂ ಮೊದಲು ಕರಾವಳಿ ಉತ್ಸವ ಮೈದಾನದಿಂದ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸುಳ್ಯದ ಕಾರ್ಯಕರ್ತೆ ಜಯಂತಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 40 ವರ್ಷಗಳಿಂದ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದರೂ ರಾಜ್ಯ ಸರಕಾರ ಈ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಬದಲಾಗಿ ನಿರಂತರ ಶೋಷಣೆ ಮಾಡಿ ಕಾರ್ಯಕರ್ತೆಯರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾರ್ಯಕತೆರ್ಯರಿಗೆ ಕೇವಲ 6 ಸಾವಿರ ರೂ. ವೇತನ ಸಿಗುತ್ತಿದೆ. ಅದರಲ್ಲೂ ಸಹಾಯಕಿಯರಿಗೆ ಬರೀ 3 ಸಾವಿರ ರೂ. ನೀಡಲಾಗುತ್ತದೆ. ಇದರಲ್ಲಿಯೇ ಅಂಗನವಾಡಿಯ ವಿದ್ಯುತ್ ಬಿಲ್, ಗ್ಯಾಸ್ ಕಟ್ಟುವ ಪ್ರಮೇಯ ಬರುತ್ತಿದೆ. ಉಳಿದ ವೇತನದಿಂದ ಯಾವ ರೀತಿಯಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಎಂದು ಪುಷ್ಪಾ ಪ್ರಶ್ನಿಸಿದರು.
ಅಂಗನವಾಡಿಯಲ್ಲಿ ಸಾಕಷ್ಟು ಕೆಲಸ ಇರುತ್ತದೆ. ದಿನನಿತ್ಯ 29 ನೋಂದಣಿಗಳನ್ನು ಸಂಪೂರ್ಣ ಮಾಡಬೇಕು. ಇದರ ಜತೆಯಲ್ಲಿ ಸಾದಿಲ್ವಾರಿಗೂ ಸರಿಯಾದ ಪ್ರಮಾಣದಲ್ಲಿ ವ್ಯವಸ್ಥೆ ಮಾಡುವುದಿಲ್ಲ. ವೈದ್ಯಕೀಯ ರಜೆಯಂತೂ ಸಿಗುವುದೇ ಇಲ್ಲ. ಈ ಕುರಿತು ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಶಾರದಾ ದೂರಿದರು.
ಅರುಣಾ ಪುತ್ತೂರು ಮಾತನಾಡಿ, ಸೇವಾ ಹಿರಿತನದ ಮೇಲೆ ಗೌರವಧನ ಹೆಚ್ಚಿಸಬೇಕು. ಅಂಗನವಾಡಿಯ ವಿದ್ಯುತ್ ವೆಚ್ಚವನ್ನು ಸರಕಾರ ಭರಿಸಬೇಕು. ದಿನ ಭತ್ತೆ ಹೆಚ್ಚಳ, ಪ್ರಭಾರ ಭತ್ತೆಯನ್ನು ಹೆಚ್ಚಿಸುವ ಮೂಲಕ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ನೆರವಾಗಬೇಕು ಎಂದರು.
ಧರಣಿಯ ಬಳಿಕ ಶಾಸಕ ಜೆ.ಆರ್.ಲೋಬೊ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







