ಗಿರಿಜನ ಕುಟುಂಬಗಳಿಗೆ ಸೌಲಭ್ಯ ಒದಗಿಸಿ : ಯಡಿಯೂರಪ್ಪ ಒತ್ತಾಯ

ಮಡಿಕೇರಿ ಡಿ.20 : ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ನಾಶಗೊಳಿಸಿ ಗಿರಿಜನ ಕುಟುಂಬಗಳನ್ನು ಬೀದಿ ಪಾಲು ಮಾಡುವ ಮೂಲಕ ರಾಜ್ಯ ಸರ್ಕಾರ ದೌರ್ಜನ್ಯ ಎಸಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಅವರು ಗಿರಿಜನ ಕುಟುಂಬಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರ ಸಂಜೆ ದಿಡ್ಡಳ್ಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿ ಗಿರಿಜನರ ಅಳಲು ಆಲಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಅರಣ್ಯದ ನಿಜವಾದ ರಕ್ಷಕರು ಆದಿವಾಸಿ ಜನಾಂಗದವರೇ ಆಗಿದ್ದು, ಇಂತಹ ಸಮುದಾಯವನ್ನು ಏಕಾಏಕಿ ಗುಡಿಸಲುಗಳನ್ನು ಧ್ವಂಸಗೊಳಿಸುವ ಮೂಲಕ ಒಕ್ಕಲೆಬ್ಬಿಸಲಾಗಿದೆ. ಈ ವಿಚಾರವನ್ನು ಪ್ರಧಾನ ಮಂತ್ರಿಗಳ ಗಮನಕ್ಕೂ ತರುವುದಾಗಿ ತಿಳಿಸಿದ ಯಡಿಯೂರಪ್ಪ, ನೂರಾರು ಗಿರಿಜನ ಕುಟುಂಬಗಳು ಗುಡಿಸಲುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥತಿಯಲ್ಲಿ ಮುಖ್ಯಮತ್ರಿಗಳು ಇತರೆ ಸಚಿವರನ್ನು ಸ್ಥಳಕ್ಕೆ ಕಳುಹಿಸುವುದರ ಬದಲಾಗಿ ತಾವೇ ಖುದ್ದಾಗಿ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.
ಗುಡಿಸಲುಗಳನ್ನು ತೆರವುಗೊಳಿಸುವುದಕ್ಕೆ ಮುಂಚಿತವಾಗಿ ಸರ್ಕಾರ ಗಿರಿಜನ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿ ಒಕ್ಕಲೆಬ್ಬಿಸಲು ಮುಂದಾಗಬೇಕಿತ್ತು. ಅದಕ್ಕೆ ಬದಲಾಗಿ ಹಠಾತ್ತನೆ ಗುಡಿಸಲು ತೆರವುಗೊಳಿಸಿ ಗಿರಿಜನರ ಬದುಕನ್ನು ಅತಂತ್ರಗೊಳಿಸಿರುವ ಕ್ರಮ ಖಂಡನೀಯವೆಂದರು.
ಯಡಿಯೂರಪ್ಪ ಅವರು ಸ್ಥಳಕ್ಕೆ ಆಗಮಿಸಿದ ಸಂದರ್ಭ ಪ್ರತಿಭಟನಾನಿರತ ಗಿರಿಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಗಿರಿಜರು ಹಾಗೂ ಬಿಜೆಪಿ ಮಂದಿಯ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಯಡಿಯೂರಪ್ಪ ಅವರು ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ, ಏಕಾಏಕಿ 577 ಗುಡಿಸಲುಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸದೆ ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಜೇನು ಕುರುಬರ ಮುತ್ತಮ್ಮ ಮಾತನಾಡಿ ಗುಡಿಸಲು ತೆರವಿನ ಸಂದರ್ಭ ತನ್ನ ಮೇಲೆ ಹಲ್ಲೆಯನ್ನು ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿಗಳು ದಿಡ್ಡಳ್ಳ್ಳಿಗೆ ಭೇಟಿ ನೀಡಿದ ಸಂದರ್ಭ ಅವರೊಂದಿಗೆ ಸಂಸದ ಪ್ರತಾಪ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಮಾಜಿ ಸಚಿವ ವಿಜಯಶಂಕರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ ಹಾಜರಿದ್ದರು.
ಮತ್ತೊಂದೆಡೆ ಪಶುಸಂಗೋಪನಾ ಇಲಾಖೆ ಸಚಿವ ಎ.ಮಂಜು ಕೂಡ ಭೇಟಿ ನೀಡಿ ಗಿರಿಜನರಿಗೆ ಧೈರ್ಯ ತುಂಬಿದರು. ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







