ಹಳೆಯ ನೋಟು ಠೇವಣಿಗೆ ಹೊಸ ನಿರ್ಬಂಧ: ಹತಾಶ ಸರಕಾರದ ಹತಾಶ ಕ್ರಮ: ಚಿದಂಬರಂ ಟೀಕೆ

ಹೊಸದಿಲ್ಲಿ, ಡಿ.20: ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ಠೇವಣಿ ಇಡಲು ಹೊಸ ನಿರ್ಬಂಧ ವಿಧಿಸಿರುವ ಸರಕಾರದ ಕ್ರಮವನ್ನು ‘ಹತಾಶ ಸರಕಾರದ ಹತಾಶ ಕ್ರಮ’ ಎಂದು ಟೀಕಿಸಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಕಾಳಧನಿಕರು ಈಗಾಗಲೇ ತಮ್ಮಲ್ಲಿರುವ ಹಣವನ್ನು ಬಿಳಿ ಮಾಡಿಕೊಂಡಾಗಿದೆ. ಆದರೆ ಬಡ ಮತ್ತು ಮಧ್ಯಮವರ್ಗದ ಜನರು ಅಸಹಾಯಕಾಗಿದ್ದಾರೆ ಎಂದಿದ್ದಾರೆ.
ಹಳೆಯ ನೋಟುಗಳನ್ನು ಠೇವಣಿ ಇಡುವ ಬಗ್ಗೆ ರಿಸರ್ವ್ ಬ್ಯಾಂಕ್ ಹೊಸ ಕಾನೂನು ಘೋಷಿಸುತ್ತದೆ. ವಿತ್ತ ಸಚಿವಾಲಯ ಅದನ್ನು ನಿರಾಕರಿಸುತ್ತದೆ. ಜನರು ಯಾರನ್ನು ನಂಬಬೇಕು. ಇಬ್ಬರೂ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಡಿ.30ರವರೆಗೆ ಹಳೆಯ ನೋಟುಗಳನ್ನು ಠೇವಣಿ ಇಡಬಹುದು ಎಂದು ಪ್ರಕಟಿಸಿದ ಮೇಲೆ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದವರು ನುಡಿದರು.
ಬ್ಯಾಂಕ್ ಖಾತೆಗಳಲ್ಲಿ 5 ಸಾವಿರಕ್ಕೂ ಹೆಚ್ಚಿನ ಹಳೆಯ ನೋಟುಗಳ ಠೇವಣಿಗೆ ಸೋಮವಾರ ರಿಸರ್ವ್ ಬ್ಯಾಂಕ್ ಹೊಸ ನಿರ್ಬಂಧವನ್ನು ವಿಧಿಸಿತ್ತು.ಈ ರೀತಿ ಠೇವಣಿ ಇಡಲು ಡಿ.30ರವರೆಗೆ ಒಮ್ಮೆ ಮಾತ್ರ ಅವಕಾಶ ನೀಡಿತ್ತು (ಅದೂ ಬ್ಯಾಂಕ್ ಅಧಿಕಾರಿಗಳಿಗೆ ವಿವರ ನೀಡಿದರೆ ಮಾತ್ರ).
ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ ಪಟೇಲ್ ಅವರನ್ನು ಸೋಮವಾರ ಟೀಕಿಸಿದ್ದ ಚಿದಂಬರಂ, ಒಂದು ಸ್ವಾಯತ್ತ ಸಂಸ್ಥೆಯ ಮುಖ್ಯಸ್ಥನಾಗಿರುವ ವ್ಯಕ್ತಿಯೋರ್ವರು ನೋಟು ಅಮಾನ್ಯದಂತಹ ಪ್ರಮುಖ ಕ್ರಮವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ವಿಫಲವಾಗಿರುವ ಬಗ್ಗೆ ತನಗೆ ಬೇಸರವಿದೆ ಎಂದಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







