ಹಳೆ ನೋಟು ಠೇವಣಿ ನಿರ್ಬಂಧ ಜೇಟ್ಲಿ ಸ್ಪಷ್ಟೀಕರಣ

ಹೊಸದಿಲ್ಲಿ, ಡಿ.20: ಒಂದೇ ಬಾರಿ ಎಷ್ಟೇ ಮೊತ್ತವನ್ನಾಗಲಿ ರದ್ದಾದ ನೋಟುಗಳಲ್ಲಿ ಠೇವಣಿಯಿರಿಸುವವರಿಗೆ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ. ಬದಲಿಗೆ, ಮತ್ತೆ ಮತ್ತೆ ಠೇವಣಿಯಿರಿಸುವವರು ಪ್ರಶ್ನೆಗಳನ್ನೆದುರಿಸಬೇಕಾಗುತ್ತದೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಸ್ಪಷ್ಟಪಡಿಸಿದ್ದಾರೆ.
ಡಿ.30ರ ಅಂತಿಮ ಗಡುವಿನ ವರೆಗೆ ರೂ.5 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಹಳೆಯ ನೋಟುಗಳಲ್ಲಿ ಠೇವಣಿಯಿರಿಸಲು ಒಮ್ಮೆ ಮಾತ್ರ ಅವಕಾಶವಿದೆ. ಆದರೆ, ಅದನ್ನು ಈ ಮೊದಲೇ ಏಕೆ ಠೇವಣಿಯಿರಿಸಿಲ್ಲವೆಂಬುದಕ್ಕೆ ವಿವರಣೆ ನೀಡಬೇಕಾಗುತ್ತದೆಂದು ಸೋಮವಾರ ಸರಕಾರ ಹೇಳಿತ್ತು. ವಿಪಕ್ಷಗಳು ಈ ನಿಯಮವನ್ನು ‘ಹತಾಶ ಕ್ರಮವೆಂದು ’ ಟೀಕಿಸಿತ್ತು.
ಹಳೆ ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿಯಿರಿಸುವ ನಿಯಮಗಳ ಹೊಸ ಬದಲಾವಣೆಯ ಕುರಿತು ಜೇಟ್ಲಿ ವಿವರಣೆ ನೀಡುತ್ತಿದ್ದರು.
‘‘ನಿಮ್ಮಲ್ಲಿ ಹಳೆಯ ನೋಟುಗಳಿದ್ದರೆ ಅವುಗಳನ್ನು ಒಮ್ಮೆಲೇ ಖಾತೆಗೆ ಜಮಾ ಮಾಡಿ. ಅಂತಹ ನೋಟುಗಳನ್ನು ಆಗಾಗ ಠೇವಣಿಯಿರಿಸುವುದರಿಂದ ಸಂಶಯ ಉದ್ಭವವಾಗುತ್ತದೆ’’ ಎಂದವರು ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲ್ ಬಂಕ್ ಹಾಗೂ ಇತರ ಕೆಲವು ಸರಕಾರಿ ಸೇವೆಗಳಿಗೆ ಹಳೆ ನೋಟುಗಳ ಬಳಕೆ ಈಗಾಗಲೇ ಕೊನೆಗೊಂಡಿದದು, ಇನ್ನು ಅವುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸುವ ಅವಕಾಶ ಮಾತ್ರ ಉಳಿದಿದೆ.
ಪ್ರಧಾನಿ ನೋಟು ರದ್ದತಿ ಘೋಷಿಸಿ 5 ವಾರಗಳಾಗಿದ್ದು, ಹೆಚ್ಚಿನವರು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಖಾತೆಗಳಿಗೆ ಜಮಾ ಮಾಡಿದ್ದಾರೆಂದು ಭಾವಿಸಲಾಗಿದೆ. ರೂ.5 ಸಾವಿರಕ್ಕಿಂತ ಹೆಚ್ಚು ಮೊತ್ತದ ಹಳೆ ನೋಟುಗಳ ಠೇವಣಿಗೆ ಇನ್ನು ಮುಂದೆ ಇಬ್ಬರು ಬ್ಯಾಂಕ್ ಅಧಿಕಾರಿಗಳಿಗೆ ತೃಪ್ತಿಕರ ಕಾರಣ ನೀಡಬೇಕಾಗುತ್ತದೆಂದು ಸರಕಾರ ಸೋಮವಾರ ನಿರ್ಬಂಧ ಹೊರಡಿಸಿತ್ತು.
ಆದರೆ, ಹಳೆ ನೋಟು ಠೇವಣಿಗೆ ಡಿ.30ರ ವರೆಗೆ ಸಮಯಾವಕಾಶವಿರುವುದರಿಂದ ಅವಸರಪಡಬೇಕಿಲ್ಲವೆಂದು ವಿತ್ತ ಸಚಿವ ಹಾಗೂ ಸರಕಾರದ ಇತರರು ಈ ಹಿಂದೆ ಹೇಳಿದ್ದುದನ್ನು ಆಕ್ರೋಶಿತ ಗ್ರಾಹಕರು ಬೆಟ್ಟು ಮಾಡಿದ್ದಾರೆ.
ಡಿ.30ರ ನಂತರಕ್ಕೂ ಸಾಕಾಗುವಷ್ಟು ನಗದು ಆರ್‌ಬಿಐಯಲ್ಲಿದೆ. ಅದು ಬ್ಯಾಂಕ್‌ಗಳಿಗೆ ಸಾಕಷ್ಟು ಹಣ ಪೂರೈಸದ ದಿನವೇ ಇಲ್ಲ. ಒಂದು ನಿರ್ದಿಷ್ಟ ಮಟ್ಟದಲ್ಲಿ ನಗದು ಪೂರೈಕೆ ಮಾಡಬೇಕಾಗುತ್ತದೆ. ಅದಕ್ಕೆ ಸಂಪೂರ್ಣ ಸಿದ್ಧತೆಯಿದೆಯೆಂದು ಜೇಟ್ಲಿ ಹೇಳಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







